ಹಾಸನ : ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಹನುಮಂತಪುರ ಬಳಿಯ ಕಾರ್ಖಾನೆಯಲ್ಲಿ ನಡೆದಿದೆ. ಆದರೆ ಕುಟುಂಬಸ್ಥರು ಇದು ಅಸಹಜ ಸಾವಲ್ಲ ಇದೊಂದು ಕೊಲೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಮೃತ ಯುವಕನನ್ನ ಪುನೀತ್ (27) ಎಂದು ಗುರುತಿಸಲಾಗಿದೆ. ಪುನೀತ್ ಕಳೆದ 6 ತಿಂಗಳಿನಿಂದ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಬುಧವಾರ ಎಂದಿನಂತೆಯೇ ಸಮವಸ್ತ್ರ ಧರಿಸಿ ಕೆಲಸಕ್ಕೆ ತೆರಳಿದ್ದ. ರಾತ್ರಿ ಪುನೀತ್ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತಂದು ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಶವಾಗಾರದ ಬಳಿ ನೂರಾರು ಮಂದಿ ಜಮಾಯಿಸಿದ್ದಾರೆ.
ಕಾರ್ಖಾನೆಯ ನೀರಿನ ಸಂಪ್‌ನಲ್ಲಿ ನಿಂತಿರುವ ಸ್ಥಿತಿಯಲ್ಲಿ ಪುನೀತ್ ಮೃತದೇಹ ಪತ್ತೆಯಾಗಿದೆ. ಆದರೂ ಮಾಹಿತಿ ನೀಡಿಲ್ಲ ಎಂದು ಕಾರ್ಖಾನೆ ಮೇಲಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪುನೀತ್ ಬೆಳಗ್ಗೆ ಸಮವಸ್ತ್ರದಲ್ಲೇ ಕೆಲಸಕ್ಕೆ ಹೋಗಿದ್ದು, ಮೃತಪಟ್ಟ ಬಳಿಕ ಸಮವಸ್ತ್ರ ಬದಲಿಸಲಾಗಿದೆ. ಪುನೀತ್ ಅವರದ್ದು ಸಹಜ ಸಾವಲ್ಲ, ಕೊಲೆ ಎಂದು ಕುಟುಂಬಸ್ಥರು ಹಾಗೂ ಸ್ನೇಹಿತರು ಆರೋಪಿಸಿದ್ದಾರೆ.
ಶೇ.80ಕ್ಕೂ ಹೆಚ್ಚು ಹೊರರಾಜ್ಯದ ಕಾರ್ಮಿಕರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆಯಲ್ಲಿ ಪದೇ ಪದೇ ಸಾವುಗಳು ಸಂಭವಿಸುತ್ತಿದ್ದು, ಪುನೀತ್ ಸ್ಥಳೀಯ ಆಗಿರುವುದರಿಂದ ಪ್ರಕರಣವನ್ನು ಮುಚ್ಚಿ ಹಾಕಲು ಸಾಧ್ಯವಾಗದೆ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಕಾರ್ಖಾನೆ ವಿರುದ್ಧ ಸಮಗ್ರ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.








