ಶಿವಮೊಗ್ಗ : ಕಾರಿನ ಬಾಡಿಗೆ ಹಣ ನೀಡಲು ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಕೆಎಎಸ್ ಅಧಿಕಾರಿ ಹಾಗೂ ನಾಡ ಕಚೇರಿ ಸಹಾಯಕ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 206 ವಿಶೇಷ ಭೂ ಸ್ವಾಧೀನಾಧಿಕಾರಿ ಸಿದ್ದಲಿಂಗ ರೆಡ್ಡಿ ಹಾಗೂ ಹೊಳಲೂರು ನಾಡಕಚೇರಿ ಸಹಾಯಕ ರಾಜೇಶ್ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಗಿಬಿದ್ದಿದ್ದಾರೆ.
ಶಿವಮೊಗ್ಗ ಓತಿಘಟ್ಟ ಗ್ರಾಮ ನಿವಾಸಿ ಕೇಶವಮೂರ್ತಿ ಎಂಬುವರು ತಮ್ಮ ಎರ್ಟಿಗಾ ಕಾರನ್ನು ಕಳೆದ ಎರಡು ವರ್ಷಗಳಿಂದ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಗೆ ಬಾಡಿಗೆಗೆ ಬಿಟ್ಟಿದ್ದರು. ಕೇಶವಮೂರ್ತಿಗೆ ಕಳೆದ ವರ್ಷದ ನವೆಂಬರ್ ತಿಂಗಳ ಬಾಡಿಗೆ ಹಣದ ಬಾಕಿ ಬರಬೇಕಿತ್ತು. ಈ ಕುರಿತು ಬಾಡಿಗೆ ಕೇಳಿದಾಗ 40 ಸಾವಿರ ರೂ. ಹಣ ಲಂಚ ನೀಡುವಂತೆ ಸಿದ್ದಲಿಂಗ ರೆಡ್ಡಿ ಬೇಡಿಕೆ ಇಟ್ಟಿದ್ದಾರೆ ಎಂದು ಕೇಶವಮೂರ್ತಿ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಈ ದೂರಿನ ಅನ್ವಯ ಶನಿವಾರ 40 ಸಾವಿರ ರೂ. ಹಣ ಲಂಚ ಪಡೆಯುವಾಗ ದಾಳಿ ನಡೆಸಲಾಗಿದೆ. ಸಿದ್ದಲಿಂಗ ರೆಡ್ಡಿ ಸೂಚನೆ ಮೇರೆಗೆ ರಾಜೇಶ್ ಫೆಬ್ರವರಿ 14ರ ಸಂಜೆ ಶಿವಮೊಗ್ಗದ ನೆಹರು ಕ್ರೀಡಾಂಗಣದ ಬಳಿ 40 ಸಾವಿರ ರೂ. ಲಂಚ ಪಡೆಯುವಾಗ ಶಿವಮೊಗ್ಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಹಣದ ಸಮೇತ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಸಿದ್ದಲಿಂಗ ರೆಡ್ಡಿಯನ್ನು ಮೊದಲನೇ ಆರೋಪಿ ಮಾಡಿದ್ದು, ರಾಜೇಶ್ ಎರಡನೇ ಆರೋಪಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








