ಚಿತ್ರದುರ್ಗ: ರಾಜ್ಯದ ಇತಿಹಾಸದಲ್ಲೇ ಬಹುದೊಡ್ಡ ಗೋಲ್ಮಾಲ್ ಎನ್ನುವಂತೆ ಒಂದೇ ದಿನದಲ್ಲಿ ಅರ್ಜಿ ಪಡೆದು, ಷೇರು ಕಟ್ಟಿಸಿಕೊಂಡು ಬರೋಬ್ಬರಿ 5,000ಕ್ಕೂ ಹೆಚ್ಚು ಷೇರುಗಳನ್ನು ಅಂಗೀಕರಿಸಿರುವಂತದ್ದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಹಿರಿಯೂರು ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ ನಿಯಮಿತವಿದೆ. ಸಹಕಾರ ಸಂಘಗಳ ಅಡಿಯಲ್ಲಿ ಬರುವಂತ ಇದರಲ್ಲಿ ನಿಯಮಗಳನ್ನೇ ಗಾಳಿಗೆ ತೂರಿ ಷೇರು ಹಾಕಿಸಿಕೊಂಡಿರೋದಾಗಿ ಆರೋಪಿಸಲಾಗಿದೆ.
ಈ ಸಂಬಂಧ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯರಾದಂತ ಬಿ.ಸಿರಿಯಪ್ಪ ಎಂಬುವರು ಚಿತ್ರದುರ್ಗದ ಸಹಕಾರ ಸಂಘಗಳ ಉಪನಿಬಂಧಕರಿಗೆ ನೀಡಿದ್ದಾರೆ. ಅದರಲ್ಲಿ ದಿನಾಂಕ 04-12-2025ರಂದು ಸುಮಾರು 3000 ದಿಂದ 3,500 ಅರ್ಜಿಗಳನ್ನು ದಿನಾಂಕ 08-02-2026ರಂದು ನಡವಳಿ ಪುಸ್ತಕದಲ್ಲಿ ಒಂದೇ ದಿನದಲ್ಲಿ ಬರೆದು, ಇಷ್ಟು ಅರ್ಜಿಗಳನ್ನು ದಾಖಲೆ ಸಮೇತ ಕ್ರೂಢೀಕರಿಸಿರುವುದು ಅಸಾಧ್ಯವಾಗಿದೆ. ಆದ್ದರಿಂದ ಅಂತಹ ಅರ್ಜಿಗಳನ್ನು ದಾಖಲೆಗಳು ಇಲ್ಲದೇ ಹಾಗೂ ಆ ದಿನಾಂಕಕ್ಕೆ ಹಣ ಪಾವತಿಸದೇ ಷೇರು ಅರ್ಜಿಗಳನ್ನು ಅಂಗೀಕರಿಸಿರುತ್ತಾರೆ ಎಂಬುದಾಗಿ ಆರೋಪಿಸಿದ್ದಾರೆ.
ಈ ಷೇರು ಅರ್ಜಿಯಲ್ಲಿ ಸಿರಿಯಪ್ಪ ಮತ್ತು ಅವರ ಸ್ನೇಹಿತರಿಂದ 2601 ಅರ್ಜಿಗಳು ಬಂದಿದ್ದಾವೆ. ಇದರಲ್ಲಿ 1,983 ಅರ್ಜಿಗಳನ್ನು ಮಾತ್ರವೇ ಅಂಗೀಕರಿಸಿದ್ದಾರೆ. ಉಳಿದ ಅರ್ಜಿಗಳನ್ನು ಅಂಗೀಕರಿಸಿರುವುದಿಲ್ಲ ಎಂಬುದಾಗಿ ದೂರಿದ್ದಾರೆ.
ನಾವು ಅಂಗೀಕರಿಸಿದಂತ ಅರ್ಜಿಗಳ ಹಣವನ್ನು ಸಂಘಕ್ಕೆ ಪಾವತಿಸಿರುತ್ತೇವೆ. ಆದರೇ ಸಂಘದ ಅಧ್ಯಕ್ಷರಾದ ಎಸ್.ಜೆ ಹನುಮಂತರಾಯ ಅವರು ಸುಳ್ಳು ಮಾಹಿತಿ ನೀಡಿ ಅವರ ಎಲ್ಲಾ ಅರ್ಜಿಗಳನ್ನು ಅಂಗೀಕರಿಸಿರುತ್ತಾರೆ. ದಯವಿಟ್ಟು ನಮಗೆ ಆಗಿರುವಂತ ಅನ್ಯಾಯವನ್ನು ಸರಿಪಡಿಸಿ, ದಾಖಲೆ ಇಲ್ಲದ ಆ ದಿನಾಂಕಕ್ಕೆ ಹಣವನ್ನು ಸಂಘಕ್ಕೆ ಕಟ್ಟದೇ ಇರುವ ಅರ್ಜಿಗಳನ್ನು ವಜಾಗೊಳಿಸಬೇಕು. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ, ತಪ್ಪು ಮಾಡಿರೋ ಆಡಳಿತ ಮಂಡಳಿಯನ್ನು ವಜಾಗೊಳಿಸುವಂತೆ ಕೋರಿದ್ದಾರೆ.
ಇನ್ನೂ ಒಂದು ವೇಳೆ ಈ ಅರ್ಜಿಗಳನ್ನು ವಜಾ ಮಾಡದಿದ್ದರೇ, ನಮಗೂ ಸಹ ಅವರು ಹಾಕಿರುವ ಅರ್ಜಿಗಳಷ್ಟೇ ಹಾಕುವುದಕ್ಕೆ ಅವಕಾಶ ಮಾಡಿಕೊಡುವಂತೆ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಬಿ.ಸಿರಿಯಪ್ಪ ಅವರು ಸಹಕಾರ ಸಂಘಗಳ ಉಪನಿಬಂಧಕರನ್ನು ವಿನಂತಿಸಿದ್ದಾರೆ.
ಈ ಬಗ್ಗೆ ಚಿತ್ರದುರ್ಗದ ಸಹಕಾರ ಉಪ ನಿಬಂಧಕರಾದಂತ ದಿಲೀಪ್ ಕುಮಾರ್ ಅವರಿಗೆ ಕರೆ ಮಾಡಿ ಮಾಹಿತಿ ಕೋರಿದಾಗ, ಎರಡು ದಿನಗಳ ಹಿಂದೆ ಬಿ.ಸಿರಿಯಪ್ಪನವರು ಷೇರು ಅರ್ಜಿಗಳಲ್ಲಿನ ಅಕ್ರಮದ ಕುರಿತಂತೆ ದೂರು ನೀಡಿದ್ದಾರೆ. ಅವರ ದೂರು ಆಧರಿಸಿ ಸೆಕ್ರೇಟರಿ, ಸಂಘದ ಅಧ್ಯಕ್ಷರಿಗೆ ನೋಟಿಸ್ ನೀಡಲಾಗಿದೆ. ಅವರ ಉತ್ತರದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಮುಂದಿನ ವಾರ ಖುದ್ದು ಸಂಘಕ್ಕೆ ಭೇಟಿಯಾಗಿ ಪರಿಶೀಲಿಸಿ, ತನಿಖೆ ಕೈಗೊಳ್ಳುವುದಾಗಿ ತಿಳಿಸಿದರು.
ಹಿರಿಯೂರು ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದಂತ ಹೆಚ್.ಜೆ.ಹನುಮಂತರಾಯ ಅವರನ್ನು ವಿಚಾರಿಸಿದಾಗ ನಾವು ಯಾವುದೇ ಅಕ್ರಮ ಎಸಗಿಲ್ಲ. ಅವರು ಮಾಡುತ್ತಿರುವಂತ ಆರೋಪಗಳು ಸುಳ್ಳು. ಸಹಕಾರ ಸಂಘದ ನಿಯಮಗಳಂತೆ ಷೇರು ಅರ್ಜಿಗಳನ್ನು ಸಭೆ ನಡೆಸಿ ಅಂಗೀಕರಿಸಲಾಗಿದೆ. ದೂರು ಆಧರಿಸಿ ಡಿಆರ್ ನೋಟಿಸ್ ನೀಡಿದ್ದು, ಅದಕ್ಕೆ ಪ್ರತ್ಯುತ್ತರ ನೀಡುತ್ತೇವೆ ಎಂಬುದಾಗಿ ಸ್ಪಷ್ಟ ಪಡಿಸಿದರು.
ಒಟ್ಟಾರೆಯಾಗಿ ರಾಜ್ಯದಲ್ಲಿ ಬಹುದೊಡ್ಡ ಗೋಲ್ಮಾಲ್ ಎನ್ನುವಂತೆ ಹಿರಿಯೂರು ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಭಾನುವಾರ ಸಭೆ ನಡೆಸಿ ಬರೋಬ್ಬರಿ 5,000ಕ್ಕೂ ಹೆಚ್ಚು ಷೇರು ಅರ್ಜಿಗಳನ್ನು ಅಂಗೀಕರಿಸೋದು ಹೇಗೆ ಎನ್ನುವ ಹಲವು ಅನುಮಾನಗಳನ್ನು ಷೇರುದಾರರು ವ್ಯಕ್ತ ಪಡಿಸಿದ್ದಾರೆ. ಆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ಈ ಹಗರಣ ಬಯಲು ಮಾಡಿ, ಸೂಕ್ತ ಕಾನೂನು ಕ್ರಮ ವಹಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ.









