ಬೆಂಗಳೂರು : ಬೆಂಗಳೂರಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಶಾಲಾ ಬಸ್ ಹರಿದು ಪೊಲೀಸ್ ಸಿಬ್ಬಂದಿಯ ಇಬ್ಬರು ಮಕ್ಕಳು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಬೆಂಗಳೂರಿನ ಹೆಣ್ಣೂರು ಸಂಚಾರಿ ಠಾಣಾ ವ್ಯಾಪ್ತಿಯ ಥಣಿಸಂದ್ರ ಬಳಿ ಘಟನೆ ನಡೆದಿದೆ. ಮೃತ ಮಕ್ಕಳನ್ನ ವರ್ಷ (2) ಹಾಗು ಭಾನು (4) ಎಂದು ತಿಳಿದುಬಂದಿದೆ.
ನಗರದ ಸಿಎಆರ್ (CAR) ವಿಭಾಗದಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾಗನಗೌಡ ಎಂಬುವವರು ಇಂದು ಬೆಳಿಗ್ಗೆ ತಮ್ಮ ಬೈಕ್‌ನಲ್ಲಿ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಹಾಲು ತರಲು ಹೊರಟಿದ್ದರು. ಥಣಿಸಂದ್ರದ ಮುಖ್ಯರಸ್ತೆಯ ಬಳಿ ಚಲಿಸುತ್ತಿದ್ದಾಗ, ಎದುರುಗಡೆಯಿಂದ ಬಂದ ಅಜ್ ಮೋನಿ ಶಾಲೆಗೆ ಸೇರಿದ ಬಸ್ ಅಚಾನಕ್ಕಾಗಿ ಟರ್ನ್ ಪಡೆದುಕೊಂಡಿದೆ. ಈ ವೇಳೆ ಬೈಕ್‌ಗೆ ಬಸ್ ಬಲವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಕಾನ್ಸ್‌ಟೇಬಲ್ ನಾಗನಗೌಡ ಅವರ ಮಗಳು ವರ್ಷ (2 ) ಹಾಗೂ ಅವರ ಅಣ್ಣನ ಮಗಳು ಭಾನು (4) ಎಂದು ಗುರುತಿಸಲಾಗಿದೆ. ಮೃತಪಟ್ಟ ಇಬ್ಬರೂ ಮಕ್ಕಳು ಪೊಲೀಸ್ ಸಿಬ್ಬಂದಿಯವರ ಕುಟುಂಬಕ್ಕೆ ಸೇರಿದವರಾಗಿದ್ದು, ಥಣಿಸಂದ್ರದ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದರು. ನೆಮ್ಮದಿಯಿಂದ ಹಾಲು ತರಲು ಹೋದ ಮಕ್ಕಳು ಶವವಾಗಿ ಮನೆಗೆ ಮರಳುತ್ತಿರುವುದನ್ನು ಕಂಡು ಸ್ಥಳೀಯರು ಕಣ್ಣೀರು ಹಾಕುತ್ತಿದ್ದಾರೆ.
ಘಟನೆ ನಡೆದ ಕೂಡಲೇ ಸ್ಥಳಕ್ಕೆ ಉತ್ತರ ವಿಭಾಗದ ಸಂಚಾರ ಪೊಲೀಸ್ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಣ್ಣೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದ್ದು, ಶಾಲಾ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.








