ಶಿವಮೊಗ್ಗ: ಜಿಲ್ಲೆಯಲ್ಲಿ ಅರಣ್ಯ ಜಮೀನು ತೆರವು ನೋಟಿಸ್ ವಿರುದ್ಧ ಕೆಡಿಪಿ ಸದಸ್ಯರೊಬ್ಬರು ಸಿಡಿದೆದ್ದಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರೂ ಸಚಿವ ಮಧು ಬಂಗಾರಪ್ಪ ಅವರು, ಈವರೆಗೆ ಬಗೆ ಹರಿಸುವಂತ ಕೆಲಸ ಮಾಡಿಲ್ಲ ಎನ್ನುವ ಅಳಲು ತೋಡಿಕೊಂಡಿದ್ದಾರೆ. ಆ ಬಗ್ಗೆ ಮುಂದೆ ಓದಿ.
ಈ ಕುರಿತಂತೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕೆಡಿಪಿ ಸದಸ್ಯ ಜಿ.ಟಿ ಸತ್ಯನಾರಾಯಣ ಕರೂರು ಎಂಬುವರು ತಮ್ಮ ಸೋಷಿಯಲ್ ಮೀಡಿಯಾ ಮುಖಪುಟದಲ್ಲಿ ಬರೆದು, ಪೋಸ್ಟ್ ಮಾಡಿದ್ದಾರೆ. ಅವರು ಬರೆದಿರುವಂತ ಪೋಸ್ಟ್ ಈ ಕೆಳಗಿನಂತಿದೆ.
Coffee ವಿತ್ ಜಿ ಟಿ
ಕಾಂಗ್ರೆಸ್ ಕಾರ್ಯಕರ್ತರೆ ಆತ್ಮಸಾಕ್ಷಿ ಕರೆಗೆ ಓಗೊಡೋಣ.. ನಮ್ಮ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡೋಣ… ✊✊✊
ಮಲೆನಾಡ ಕಾಂಗ್ರೆಸ್ ಮತದಾರರಿಗೆ ನಿರಾಸೆ…!!
ಈ ಸ್ಥಿತಿಯಲ್ಲಿ ಹಳ್ಳಿಗಳ ಮತದಾರರ ಬಳಿ ಹೇಗೆ ಹೋಗುವುದು ಕಾರ್ಯಕರ್ತರ ಎದುರಿನ ಪ್ರಶ್ನೆ..!
ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಆಗಿ ಮಲೆನಾಡಿನ ಹಳ್ಳಿಗಳಿಗೆ ಹೋಗಲು ನೋವಾಗುತ್ತದೆ. ಅಧಿಕಾರ ತರಲೆಬೇಕು ಆ ಮೂಲಕ ನಮ್ಮ ನೆಲದ ಬಿಕ್ಕಟ್ಟುಗಳನ್ನ ಕೇಳುವ ಸರ್ಕಾರ ಆಯ್ಕೆ ಮಾಡಬೇಕು. ನಮ್ಮದೇ ಸರ್ಕಾರ ಇದ್ದಾಗ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರೇ ಇದ್ದಾಗ ಎಲ್ಲವೂ ಸಲೀಸು ಎಂಬ ನಂಬಿಕೆಯಿಂದಲೇ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತು ಹಾಕಿ ಚುನಾವಣೆ ಎದುರಿಸಿದೆವು. ಸರ್ಕಾರ ಒಂದು ವರ್ಷ ಟೇಕ್ ಆಪ್ ಸಮಯ ಎಂದು ಕಾದೆವು. ಎಚ್ಚರ ಆಗದೇ ಇದ್ದಾಗ ಸಾಗರದಲ್ಲಿ ಜಿಲ್ಲೆಯ ಕಾಡು ನಾಡಿನ ಬಿಕ್ಕಟ್ಟು, ಮುಳುಗಡೆಯ ಬಹುಮುಖಿ ಸಮಸ್ಯೆ ಪರಿಹಾರಕೆ ಒತ್ತಾಯಿಸಿ ಅನಿರ್ದಿಷ್ಟ ಅವಧಿ ಪ್ರತಿಭಟನೆ ನಡೆಸಿ ಲಿಂಗನಮಕ್ಕಿ ಚಲೋ ಎಂದು ಸಾವಿರಾರು ಜನ ಪಾದಯಾತ್ರೆ ಹೊರಟೆವು. ಲಿಂಗನಮಕ್ಕಿ ಚಲೋ 2024
ಅದರಲ್ಲಿ ಕಾಂಗ್ರೆಸ್ ಮತದಾರರೇ ಹೆಚ್ಚು ಇದ್ದರು.
ಅವತ್ತು ನಮ್ಮ ಎದುರಾದವರು Madhu Bangarappa ನವರು.
ನಮ್ಮ ಉಸ್ತುವಾರಿ ಸಚಿವರು. ನಮ್ಮನ್ನ ಮಾತುಕತೆಗೆ ವಿಧಾನಸೌಧಕೆ ಅಹ್ವಾನ ಮಾಡಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಜರಿದ್ದು ಮಧು ಬಂಗಾರಪ್ಪ ನೇತೃತ್ವದಲ್ಲಿ ನಮಗೆ ಭರವಸೆ ನೀಡಿದರು.
1) ಒಂದು ವಾರದ ಒಳಗೆ ಶರಾವತಿ ಸಂತ್ರಸ್ತರ ಸಮಸ್ಯೆ ಬಗ್ಗೆ ಹಿರಿಯ ಐ ಎ ಎಸ್ ಅಧಿಕಾರಿಗಳು, ಜನಪ್ರತಿನಿಧಿಗಳು ರೈತ ಪ್ರತಿನಿಧಿಗಳು ಟಾಸ್ಕ್ ಫೋರ್ಸ್ ರಚನೆ ಮಾಡುತ್ತೇವೆ.
2.) ಟಾಸ್ಕ್ ಫೋರ್ಸ್ ರಚನೆ ಆಗಿ ಅಂತಿಮ ವರದಿ ಬರುವ ತನಕ ಯಾವುದೇ ಒಕ್ಕಲು ಎಬ್ಬಿಸುವ ಪ್ರಕ್ರಿಯೆ ನಡೆಸುವುದಿಲ್ಲ.
3) ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿಗಳನ್ನ ಜಿಲ್ಲಾಧಿಕಾರಿ ಹಂತದಲ್ಲಿ ನಿಯಮ ಮೀರಿ ವಜಾ ಮಾಡಿರುವುದನ್ನ ತಡೆ ಹಿಡಿದು ಪುನಃ ಗ್ರಾಮ ಮಟ್ಟದ ಹಂತಕ್ಕೆ ಕಳಿಸುತ್ತೇವೆ.
4 ) ಉರುಳುಗಲ್ಲು ಊರಿಗೆ ವಿದ್ಯುತ್ ನೀಡಲು ತತ್ ಕ್ಷಣದಲ್ಲಿ ಕ್ರಮ ತೆಗೆದುಕೊಂಡು ವರ್ಷ ಒಳಗೆ ವಿದ್ಯುತ್ ಕೊಡುತ್ತೇವೆ
ಈ ಸಭೆ ನಡೆದು ಒಂದೂವರೇ ವರ್ಷ ಮುಗಿದೆದೆ. ಇದರಲ್ಲಿ ಯಾವುದನ್ನು ಮಾಡಿದ್ದಾರೆ ಅಂತ ಸ್ವತಃ ಮಧುಬಂಗಾರಪ್ಪನವರೇ ಹೇಳಿಬಿಡಲಿ.
ಮಧುಬಂಗಾರಪ್ಪನವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಿಗಲು ಕಾರಣ ಅವರು ನಮ್ಮ ನಾಯಕರಾದ ಬಂಗಾರಪ್ಪನವರ ಮಗ ಮತ್ತು ಬಹುಸಂಖ್ಯಾತ ದೀವರು ಸಮುದಾಯದ ನಾಯಕ ಎನ್ನುವ ಕಾರಣಕ್ಕೆ.
ತನಗೆ ಅಧಿಕಾರ ಕೊಟ್ಟ ನೆಲ ನಡುಗುತ್ತಾ ಇದೆ, ಮತ ಹಾಕಿ ಬಲ ಕೊಟ್ಟ ಜನರನ್ನ ಅತ್ಯಂತ ಕನಿಷ್ಠ ರೀತಿಯಲ್ಲಿ ಎಡಮನೆಯಂತ ಊರಲ್ಲಿ ಒಕ್ಕಲು ಎಬ್ಬಿಸುತ್ತಾ ಇದ್ದಾಗ ನಮ್ಮ ಮಂತ್ರಿಗಳು ಮಕ್ಕಳಿಗೆ ಹೆಚ್ಚು ಮೊಟ್ಟೆ ಕೊಟ್ಟ ಬಗ್ಗೆ ಮಾತಾಡುತ ಇದ್ದಾರೆ. ಶಿಕ್ಷಣ ಮಂತ್ರಿ ಆಗಿ ತಮ್ಮ ಸಾಧನೆ ವಿವರಿಸಲು ಸೀಮಿತ ಆಗಿದ್ದಾರೆ.
ಮಧುಬಂಗಾರಪ್ಪ ಸರ್…
ಎಡಮನೆ ಕುಟುಂಬಗಳು ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಹಾಕಿದ್ದಾರೆ. ನೀವೇ ಹಾಜರಿದ್ದ ಸಭೆಯಲ್ಲಿ ಅರಣ್ಯ ಹಕ್ಕು ಅರ್ಜಿ ರದ್ದು ಹಿಂದಕೆ ಪಡೆಯುವ ಬಗ್ಗೆ ಸರ್ಕಾರ ಹೇಳಿದೆ. ಎಡಮನೆ ರೈತರ ಮೇಲೆ ಕೇಸು ಹಾಕಿದ್ದು 1998 ರಲ್ಲಿ ಅಂದರೆ 25 ವರ್ಷ ಹಿಂದೆ 2007ರಲ್ಲಿ ಅರಣ್ಯ ಹಕ್ಕು ಕಾಯಿದೆ ಬಂದಿದೆ. ಅರ್ಜಿ ಜೀವಂತ ಇದೆ ಅಂತ ನಮ್ಮ ಸರ್ಕಾರ ಹೇಳುತ್ತೆ. ಹಾಗಾದರೆ ಇವರನ್ನು ಒಕ್ಕಲು ಎಬ್ಬಿಸುವುದು ಯಾರನ್ನು ನೆಚ್ಚಿಸಲು..?
ನೀವು ಬೇಳೂರು ಇಬ್ಬರು ಹೇಳಿಬಿಡಿ.. ಉರುಳುಗಲ್ಲಿಗೆ ಕರೆಂಟು ಕೊಡಲು ಇನ್ನೆಷ್ಟು ದಶಕ ಬೇಕು…? ಒಬ್ಬ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ನನಗೆ ತೀವ್ರ ಆಗಿ ಅನ್ನಿಸಿದೆ.
ನಮ್ಮ ಸರ್ಕಾರ ಮಲೆನಾಡ ಜನರ ನೆಲ ನದಿ ಬಿಕ್ಕಟ್ಟುಗಳ ಬಗ್ಗೆ ಈ ಮೂರು ವರ್ಷದಲಿ ಶಾಸನಾತ್ಮಕ ಆಗಿರುವುದು ಏನನ್ನೂ ಮಾಡಿಲ್ಲ. ಇದರ ಜತೆಯಲ್ಲಿ ರೈತರನ್ನು ವಂಚನೆ ಮಾಡುವ ಸುಳ್ಳುಗಳು. ಶರಾವತಿ ಪಂಪ್ ಸ್ಟೋರ್ ಯೋಜನೆ ಸರ್ಕಾರಕೆ ಆಸಕ್ತಿ ಹೆಚ್ಚು. ಆದರೆ ಈ ನದಿಯ ಮಕ್ಕಳು..? ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿಗಾಗಿ ವಿಷೇಶ ಅಧಿವೇಶನ ಕರೆಯುವ ಬದ್ಧತೆ ನಮ್ಮ ಸರ್ಕಾರಕೆ ಇಲ್ಲದೇ ಇರುವುದೇ ಇದಕ್ಕೆ ಸಾಕ್ಷಿ.
ಕಾಂಗ್ರೆಸ್ ಬಂದಾಗ ಜನರ ನಿಜದ ಕಷ್ಟಗಳ ಕಡೆ ಬಗೆ ಹರಿಸಲು ಶಾಸನಾತ್ಮಕ ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ಜನರ ಅದರಲ್ಲೂ ಕಾಂಗ್ರೆಸ್ ಮತದಾರರ ನಂಬಿಕೆ. ಕ್ಷಮಿಸಿ… ಮಲೆನಾಡಿನಲ್ಲಿ ಅದರಲ್ಲೂ ಶಿವಮೊಗ್ಗದಲ್ಲಿ ನಂಬಿಕೆ ಕಳೆದುಹೋಗಿದೆ. ಈ ಹೊತ್ತಿನಲ್ಲಿ ನೆಲ ಮತ್ತು ಜನರ ಬಗ್ಗೆ ನಿಜದ ಕಾಳಜಿ ಹೊಂದಿದ ಯಾವ ಕಾಂಗ್ರೆಸ್ ಕಾರ್ಯಕರ್ತ ಎದೆ ಉಬ್ಬಿಸಿ ಮತದಾರರ ಬಳಿ ಹೋಗಬಲ್ಲ..?
ಕ್ಷಮಿಸಿ… ಮಲೆನಾಡಿನ ನೆಲ ನದಿ ಕಾಡು ನಾಡಿನ ಬಿಕ್ಕಟ್ಟು ಎದುರಿಸುವುದರಲ್ಲಿ ನಮ್ಮ ಸರ್ಕಾರ ಎಡವಿದೆ..!!
ನಮ್ಮ ಕಾಂಗ್ರೆಸ್ ಮುಖಂಡರೆ..
ಕಾರ್ಯಕರ್ತರೇ ಸ್ವಲ್ಪ ಬಾಯಿಬಿಡಿ….
ನಾಯಕರನ್ನು ನೆಚ್ಚಿಸಿವುದಕ್ಕಿಂತ ಜನರೇ ಮುಖ್ಯ.
ಅವರಿದ್ದರೆ ನಾವು.. ಈ ಪಟ್ಟ ಪದಕ ಎಲ್ಲಾ 😔
ಜಿ ಟಿ ಸತ್ಯನಾರಾಯಣ ಕರೂರು.. ಎಂಬುದಾಗಿ ಸಚಿವ ಮಧು ಬಂಗಾರಪ್ಪ ಅವರ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಬೆಂಗಳೂರು ಏರ್‌ಪೋರ್ಟ್‍ನಲ್ಲಿ ಡ್ರೋನ್ ಹಾರಾಟ: ಯೂಟ್ಯೂಬರ್ ವಿರುದ್ಧ FIR ದಾಖಲು








