ಬೆಂಗಳೂರು : ಇತ್ತೀಚಿಗೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು ಇದರಿಂದ ಅನೇಕ ಅಮಾಯಕ ಜನರು ದೊಡ್ಡ ದೊಡ್ಡ ಉದ್ಯಮಿಗಳು ಸೈಬರ್ ವಂಚನೆಗೆ ಬಲಿಯಾಗುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಪ್ರಕರಣಗಳಿಗೆ ಕಡಿವಾಣ ಹಾಕಲು ಸಿಐಡಿ ಸೈಬರ್ ಕ್ರೈಂ ಮಹತ್ವದ ಕಾರ್ಯಾಚರಣೆ ನಡೆಸಿದೆ. ಫೆಬ್ರವರಿ 6ರಂದು ನಡೆದ ದಾಳಿಯಲ್ಲಿ, 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಖಾತೆಗಳನ್ನು ಪತ್ತೆ ಹಚ್ಚಿ, 13 ಪ್ರಮುಖ ವಂಚಕರನ್ನು ಬಂಧಿಸಲಾಗಿದೆ.
ನಿನ್ನೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ ಸಿಐಡಿ ತಂಡ, ಫೆಬ್ರವರಿ 6ರಂದು ಈ ಪ್ರಕರಣದ ಪ್ರಮುಖ 13 ಮಾಸ್ಟರ್ ಮೈಂಡ್‌ಗಳನ್ನು ಬಂಧಿಸಿದೆ. ಅಮಾಯಕ ಜನರ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ಹಾಗೂ ಖಾತೆ ವಿವರಗಳನ್ನು ಹಣಕ್ಕಾಗಿ ಸಂಗ್ರಹಿಸಿ ಸೈಬರ್ ವಂಚಕರಿಗೆ ನೀಡಲಾಗುತ್ತಿತ್ತು ಎಂಬುದು ಸಿಐಡಿ ತನಿಖೆ ವೇಳೆ ಬಯಲಾಗಿದೆ. ಈ ಮ್ಯೂಲ್ ಅಕೌಂಟ್‌ಗಳ ಮೂಲಕ ಆನ್‌ಲೈನ್ ವಂಚನೆ ನಡೆಸಿ ಹಣ ವರ್ಗಾವಣೆ ಹಾಗೂ ಎಟಿಎಂ ಮೂಲಕ ಹಣ ವಿತ್‌ಡ್ರಾ ಮಾಡಲಾಗುತ್ತಿತ್ತು.
ದಾಳಿಯ ವೇಳೆ ಸಿಐಡಿ ಅಧಿಕಾರಿಗಳಿಗೆ ಸುಮಾರು 40,000ಕ್ಕೂ ಹೆಚ್ಚು ಅಮಾಯಕ ಜನರ ಮ್ಯೂಲ್ ಅಕೌಂಟ್ ಗಳು ಪತ್ತೆಯಾಗಿವೆ. ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆ ಮ್ಯೂಲ್ ಅಕೌಂಟ್‌ಗಳ ವಿರುದ್ಧ ಸಿಐಡಿ ತಂಡ ತೀವ್ರ ನಿಗಾ ವಹಿಸಿತ್ತು. ಇನ್ನು ಸೈಬರ್ ವಂಚಕರಿಗೆ ಖಾತೆ ವಿವರ ನೀಡಿದ ಅಮಾಯಕರಿಗೆ ಈ ವಂಚನೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿದು ಬಂದಿದೆ.ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ







