ಬೆಂಗಳೂರು : ವಿಚಿತ್ರ ಪ್ರಕರಣದ ಕುರಿತು ನಿನ್ನೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಕೇಸ್ ಏನೆಂದರೆ ಮಗುವಿಗೆ ಬಾಡಿ ಲೋಷನ್ ತರಲಿಲ್ಲವೆಂದು ಪತ್ನಿ ಪತಿಯ ವಿರುದ್ಧ ಹೂಡಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ತನ್ನ ವಿರುದ್ಧ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಮತ್ತು ಆ ಸಂಬಂಧ ನಗರದ 32ನೇ ಎಸಿಜೆಎಂ ಕೋರ್ಟ್‌ನಲ್ಲಿರುವ ನ್ಯಾಯಿಕ ಪ್ರಕ್ರಿಯೆ ರದ್ದು ಕೋರಿ 33 ವರ್ಷದ ವ್ಯಕ್ತಿಯೊಬ್ಬರು ದಾಖಲಿಸಿರುವ ಕ್ರಿಮಿನಲ್ ಅರ್ಜಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತು.
ಅರ್ಜಿದಾರರ ಪರ ವಾದಿಸಿದ ವಕೀಲೆ ಕೆ.ರಾಮುಲಾ, ಅರ್ಜಿದಾರರು ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆಂಬ ಮಾಹಿತಿ ತಿಳಿದ ಕೂಡಲೇ ಪತ್ನಿ ಬೇಕೆಂದೇ ಈ ಸುಳ್ಳು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಆಕೆ ಆರೋಪಿಸಿರುವ ಅಂಶಗಳೆಲ್ಲಾ ಅಸ್ಪಷ್ಟ ಹಾಗೂ ವಿರೋಧಾಭಾಸದಿಂದ ಕೂಡಿವೆ ಎಂದರು.
ಪ್ರಕರಣದ ಸಾಕ್ಷಿಗಳೂ ಸುಳ್ಳು ಹೇಳಿಕೆ ದಾಖಲಿಸಿದ್ದು ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ 1860ರ ಕಲಂ 498(ಎ) ಮತ್ತು 323ರಡಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು ಎಂದು ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಪ್ರಕರಣದ ವಿಚಾರಣೆಗೆ ತಡೆ ನೀಡಿ ಆದೇಶಿಸಿ ವಿಚಾರಣೆ ಮುಂದೂಡಿತು.
ಆಕೆ ನನಗೆ ಫೋನ್ ಮಾಡಿ ಮಗುವಿಗೆ ಕೊಡಲು ಹಾಲಿಲ್ಲ, ಮೈಗೆ ಲೇಪಿಸಲು ಬಾಡಿ ಲೋಶನ್ ಇಲ್ಲ. ಮನೆಗೆ ಬರ್ತಾ ತೆಗೆದುಕೊಂಡು ಬನ್ನಿ ಎಂದಳು. ನಾನು ಸುಮ್ಮನೆ ಹಣ ಖರ್ಚು ಮಾಡುವುದಿಲ್ಲವೆಂದು ನಿರಾಕರಿಸಿದೆ. ಅಷ್ಟಕ್ಕೇ ಆಕೆ ನನ್ನ ವಿರುದ್ಧ ಕೌಟುಂಬಿಕ ದೌರ್ಜನ್ಯ ಆರೋಪದ ಕೇಸ್ ದಾಖಲಿಸಿದ್ದಾರೆ ಎಂದು ಪತಿ ಅರ್ಜಿಯಲ್ಲಿ ಹೇಳಿದ್ದಾರೆ. ಇದೀಗ ಪತ್ನಿ ಪತಿಯ ವಿರುದ್ಧ ಹೂಡಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.








