ಬೆಂಗಳೂರು : ಪೋಷಕರು ಬೈದಿದ್ದಕ್ಕೆ ಬೆಂಗಳೂರಿನ ಅಕ್ಕ-ತಮ್ಮಂದಿರು ಮನೆ ಬಿಟ್ಟು ಹೋಗಿ ಊರೂರು ಸುತ್ತಿರುವ ಅಘಾತಕಾರಿ ಘಟನೆ ಬೆಂಗಳೂರಲ್ಲಿ ನಡೆದಿದೆ. 13 ವರ್ಷದ ಬಾಲಕಿ ಮಹಿಳೆಯರ ಉಚಿತ ಬಸ್ ಯೋಜನೆ ಬಳಸಿಕೊಂಡು ತಮ್ಮನೊಂದಿಗೆ ರಾಜ್ಯದ ಹಲವೆಡೆ ಸುತ್ತಾಡಿದ್ದಾಳೆ.
ಮಕ್ಕಳು ಕಾಣೆಯಾಗಿದ್ದಾರೆ ಎಂದು ಪೋಷಕರು ದೂರು ನೀಡಿದ ನಂತರ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಸಿಸಿಟಿವಿ ಮತ್ತು ಸಾರ್ವಜನಿಕರ ಮಾಹಿತಿ ಆಧರಿಸಿ ಮಕ್ಕಳನ್ನು ಪತ್ತೆ ಹಚ್ಚಿ ಪೋಷಕರ ಮಡಿಲಿಗೆ ಸೇರಿಸಿದ್ದಾರೆ. 13 ವರ್ಷದ ಬಾಲಕಿ, 9 ವರ್ಷದ ಬಾಲಕನನ್ನು ಪೋಷಕರು ಟ್ಯೂಷನ್‌ಗೆ ಹಾಕಿದ್ದರು. ಆದರೆ ಮಕ್ಕಳು ಟ್ಯೂಷನ್‌ಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದರು.
ಮಕ್ಕಳ ಹಠ ಮಾಡಿದ್ದಕ್ಕೆ ಸಿಟ್ಟಾದ ಪೋಷಕರು ಅವರಿಗೆ ಬೈದಿದ್ದರು. ಪೋಷಕರು ಬೈದಿದ್ದಕ್ಕೆ ನೊಂದು ಫೆ.1ರ ಮಧ್ಯಾಹ್ನ 3 ಗಂಟೆಗೆ ಮಾರತ್ತಹಳ್ಳಿಯ ಅಶ್ವತ್ಥನಗರದಿಂದ ಅಕ್ಕ ಮತ್ತು ತಮ್ಮ ಮನೆ ಬಿಟ್ಟು ತೆರಳಿದ್ದಾರೆ. ಬಾಲಕಿ ಮನೆಯಿಂದ ತೆರಳುವಾಗ ಆಧಾರ್ ಕಾರ್ಡ್ ಹಿಡಿದುಕೊಂಡಿದ್ದಳು.
ಆಧಾರ್ ಕಾರ್ಡ್ ಇರೋದ್ರಿಂದ ಸರ್ಕಾರಿ ಬಸ್ಗಳಲ್ಲಿ ಬಾಲಕಿಗೆ ಉಚಿತವಾಗಿ ಪ್ರಯಾಣಿಸಿದ್ದರೆ, ತಮ್ಮನಿಗೆ ಟಿಕೆಟ್ ಮಾಡದೆ ಕರೆದೊಯ್ದಿದ್ದಳು. ಇತ್ತ ಮಕ್ಕಳು ಕಾಣೆಯಾಗಿರುವ ಬಗ್ಗೆ ಆತಂಕಗೊಂಡ ಪೋಷಕರು ಅವರಿಗಾಗಿ ಹುಡುಕಾಡಿದ್ದಾರೆ. ಬಳಿಕ HAL ಠಾಣೆಯಲ್ಲಿ ನಾಪತ್ತೆ ದೂರು ಕೂಡ ದಾಖಲಿಸಿದ್ದಾರೆ. ತಕ್ಷಣ ಅಲರ್ಟ್ ಆದ ಪೊಲೀಸರು ಈ ಬಗ್ಗೆ ರಾಜ್ಯಾದ್ಯಂತ ಪೊಲೀಸರಿಗೆ ಮಾಹಿತಿ ನೀಡುವ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಮಕ್ಕಳ ಕುರಿತು ಮಾಹಿತಿ ಹಂಚಿಕೊಂಡಿದ್ದರು.
ಫೋಟೋ ನೋಡಿ ಸಾರ್ವಜನಿಕರು ಚಿತ್ರದುರ್ಗದಲ್ಲಿ ಮಕ್ಕಳು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಚಿತ್ರದುರ್ಗ ಪೊಲೀಸರು ಮಕ್ಕಳಿದ್ದ ಸ್ಥಳಕ್ಕೆ ತೆರಳಿ ಅವರನ್ನು ಠಾಣೆಗೆ ಕರೆತಂದು ಹೆಚ್ಎಎಲ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಹೆಚ್‌ಎಎಲ್ ಪೊಲೀಸರು ಮಕ್ಕಳನ್ನು ಈಗ ಪೋಷಕರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.








