ಬೆಂಗಳೂರು : ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಮತ್ತು ಸಂವಿಧಾನಕ್ಕೆ ಅಪಚಾರ ಎಸಗಿರುವ ಆಧಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ 51 ಜನರನ್ನು ಅವರ ಹುದ್ದೆಗಳಿಂದ ವಜಾಗೊಳಿಸಿ ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರನಿಗೆ 10 ಲಕ್ಷ ರು. ದಂಡ ಹಾಕುವುದಾಗಿ ಎಚ್ಚರಿಸಿತು.
ನೇಲೋಗಿಯ ‘ಭ್ರಷ್ಟಾಚಾರ ವಿರೋಧ ಪಕ್ಷ’ದ ರಾಷ್ಟ್ರೀಯ ಅಧ್ಯಕ್ಷ ಕಲ್ಲಾಲಿಂಗ ಈ. ಹೂಗಾರ ಎಂಬುವರು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಈ ಅರ್ಜಿಯಲ್ಲಿ ಮೆರಿಟ್ ಇಲ್ಲದಿರುವುದರಿಂದ ವಜಾಗೊಳಿಸಲಾಗುತ್ತಿದೆ. ಅರ್ಜಿ ದಾರರಿಗೆ 10 ಲಕ್ಷರು. ದಂಡ ವಿಧಿಸಬೇಕಿತ್ತು. ಆದರೆ, ಅರ್ಜಿದಾರ ಕೆಪಿಟಿಸಿಎಲ್ ನಿಂದ(ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ) ವಜಾಗೊಂಡ ನೌಕರನಾಗಿದ್ದಾನೆ. ಆದ ಕಾರಣ ದಂಡ ಹಾಕದೆ ಸುಮ್ಮನೇ ಬಿಡುತ್ತಿದ್ದೇನೆ ಎಂದು ಎಚ್ಚರಿಸಿದರು.
ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊ ಳ್ಳುವ ಮೂಲಕ ಸಂವಿಧಾನ ಅವಮಾನಿಸಿರುವ ಮತ್ತು ಭ್ರಷ್ಟಾಚಾ ರದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ಡಿ. ಕೆ.ಶಿವಕುಮಾರ್, ಜೇವರ್ಗಿ ಕ್ಷೇತ್ರದ ಶಾಸಕ ಡಾ.ಅಜಯ್ ಸಿಂಗ್, ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಕೆಪಿಟಿಸಿಎಲ್ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೂ ಸೇರಿದಂತೆ ಒಟ್ಟು 51 ಜನರನ್ನು ಅವರ ಹುದ್ದೆಗಳಿಂದ ತಕ್ಷಣವೇ ವಜಾಗೊಳಿಸಬೇಕು.
ಅವರ ವಿರುದ್ಧ ಸಿಬಿಐ, ಎನ್‌ಐಎ, ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆಯಿಂದ ತುರ್ತು ತನಿಖೆಗೆ ನಿರ್ದೇಶಿಸಬೇಕು. ಇವರು ಪಡೆಯುತ್ತಿರುವ ಸಂಬಳ, ಪಿಂಚಣಿ ಇತ್ಯಾದಿಗಳನ್ನು ಕ್ರಿಮಿನಲ್ ಅಪರಾಧ ಕೃತ್ಯವೆಂದು ಪರಿಗಣಿಸಿ ಕಾನೂನು ಕ್ರಮಕ್ಕೆ ಆದೇಶಿಸಬೇಕು ಎಂದು ಕೋರಿ ಕಲ್ಲಾಲಿಂಗ ಈ. ಹೂಗಾರ ಅರ್ಜಿ ಸಲ್ಲಿಸಿದ್ದರು.








