ದಾವಣಗೆರೆ : ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರ ಆಪ್ತ ಅಯೂಬ್ ಪೈಲ್ವಾನ್ ಎಂಬವರ ಪುತ್ರ ಹಸೇನ್ ಹಾಗೂ ಆತನ ಸ್ನೇಹಿತನನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ಅಯೂಬ್ ಪೈಲ್ವಾನ್ ಅವರ ಇನ್ನೊಬ್ಬ ಪುತ್ರ ಹುಸೇನ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಒಂದೇ ಕೋಮಿನ ಎರಡು ಯುವಕರ ಗುಂಪಿನ ನಡುವೆ ಘರ್ಷಣೆ ನಡೆಯುತ್ತಿತ್ತು. ಈ ವೇಳೆ ನಿಯಂತ್ರಣಕ್ಕೆ ಮುಂದಾದ ಕಾನ್ಸ್ಟೇಬಲ್ ಹರೀಶ್ ಹಾಗೂ ಕೆಂಚಪ್ಪ ಎಂಬವರ ಮೇಲೆ ಕಿಡಿಗೇಡಿಗಳು ಏಕಾಏಕಿ ಹಲ್ಲೆ ಮಾಡಿದ್ದರು.
ಹಲ್ಲೆಗೆ ಸಂಬಂಧಿಸಿದಂತೆ 10 ಜನ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹಲ್ಲೆಯಿಂದ ಪೊಲೀಸ್ ಸಿಬ್ಬಂದಿ ತಲೆ ಹಾಗೂ ಮುಖಕ್ಕೆ ಗಾಯಗಳಾಗಿದ್ದು, ಅನಿರೀಕ್ಷಿತ ಹಲ್ಲೆಯಿಂದ ಆಘಾತಕ್ಕೊಳಗಾಗಿದ್ದಾರೆ. ರಾತ್ರಿಯಿಂದ ಜ್ವರದಿಂದ ಬಳಲುತ್ತಿದ್ದಾರೆ. ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ








