ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ಪೌರಾಯುಕ್ತೆಗೆ ಧಮ್ಕಿ ಪ್ರಕರಣದ ಆರೋಪಿ ರಾಜೀವ್ ಗೌಡ ಬಂಧನ ವಿಳಂಬಕ್ಕೆ ಸ್ವತಃ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಗೃಹ ಸಚಿವರು ಆರೋಪಿಯ ಶೀಘ್ರ ಬಂಧನದ ಭರವಸೆ ನೀಡಿದ್ದು, ಕಳೆದ ಕೆಲ ದಿನಗಳಿಂದ ರಾಜೀವ್ ಮಂಗಳೂರಿನಲ್ಲಿದ್ದ ಬಗ್ಗೆ ಮಾಹಿತಿ ದೊರೆತಿದೆ. ಆದರೆ ಆತ ಈಗ ಅಲ್ಲಿಂದಲೂ ಎಸ್ಕೇಪ್ ಆಗಿದ್ದು, ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಪ್ರಕರಣ ಸಂಬಂಧ ಆರೋಪಿ ರಾಜೀವ್ ಗೌಡನ ಬಂಧನ ಇನ್ನೂ ಆಗದ ಕಾರಣ ಪೊಲೀಸರ ಕಾರ್ಯವೈಖರಿ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಬಳಿ ಮಾಹಿತಿ ಪಡೆದಿರುವ ಮುಖ್ಯಮಂತ್ರಿಗಳು, ನ್ಯಾಯಾಲಯಗಳಲ್ಲಿ ಜಾಮೀನು ಅರ್ಜಿ ವಜಾ ಆಗಿದ್ದರೂ ಯಾಕೆ ಆತನನ್ನು ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ರಾಜೀವ್ ಗೌಡ ಮಂಗಳೂರಿನಿಂದ ಬೆಂಗಳೂರಿನಲ್ಲಿರುವ ಸಹೋದರಿಗೆ ಕರೆ ಮಾಡಿದ್ದ. ಕಳೆದ 3 ದಿನಗಳಿಂದ ರಾಜೀವ್ ಗೌಡ ಮಂಗಳೂರಲ್ಲಿದ್ದ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆ ಆತನ ಸಹೋದರಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ರಾಜೀವ್ ಗೌಡ ಅದಾಗಲೇ ಮಂಗಳೂರಿನಿಂದಲೂ ಪರಾರಿಯಾಗಿದ್ದಾನೆ.
ಆರೋಪಿ ರಾಜೀವ್ ಗೌಡ ಪತ್ನಿ ಸಹನಾ ಪೊಲೀಸರ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದ್ದು, ಮನೆ ಕೆಲಸದವರ ಸಮ್ಮುಖದಲ್ಲಿ ಆರೋಪಿ ಮನೆಯಲ್ಲಿ ಶೋಧ ನಡೆಸಲಾಗಿದೆ. ಬೆಂಗಳೂರಿನ ಸಂಜಯ್ ನಗರ, ಡಾಲರ್ಸ್ ಕಾಲೋನಿಯಲ್ಲಿರುವ ಮನೆಗಳಲ್ಲಿನ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪೊಲೀಸರು ಜಾಲಾಡಿದ್ದಾರೆ.








