ಬೆಂಗಳೂರು : ಬೆಂಗಳೂರಿನಲ್ಲಿ ನಡು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿಯೇ ಹೊತ್ತಿ ಉರಿದಿರುವ ಘಟನೆ ನಡೆದಿದೆ. ನಡುರಸ್ತೆಯಲ್ಲೇ ಬೆಳಗ್ಗೆ 7:30 ರ ಸುಮಾರಿಗೆ ವರ್ಣ ಕಾರು ಧಗಧಗನೆ ಬೆಂಕಿಗೆ ಆಹುತಿಯಾಗಿದೆ. ಯಶವಂತಪುರದಿಂದ ಟಾಟಾ ಇನ್ಸ್ಟಿಟ್ಯೂಟ್ ಕಡೆಗೆ ಹೋಗುವ ರಸ್ತೆಯಲ್ಲಿ ಘಟನೆ ನಡೆದಿದೆ.
ಕಾರಿನಲ್ಲಿದ್ದ ಮೂವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.ಬೆಂಕಿಗಾಹುತಿಯಾದ ವೈಟ್ ಬೋರ್ಡ್ ವರ್ಣ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಕಾರನ್ನು ಸ್ಟಾರ್ಟ್ ಮಾಡಿ ಕೇವಲ ಒಂದು ಕಿಮೀ ದೂರ ಕ್ರಮಿಸಲಾಗಿತ್ತು. ಕಾರಿನ ಇಂಜಿನ್ ಭಾಗದಲ್ಲಿ ಬೆಂಕಿ, ಹೊಗೆ ಕಾಣಿಸೊಕೊಂಡಿದೆ. ಕೂಡಲೇ ಕಾರಿನಲ್ಲಿದ್ದವರು ಇಳಿದು ಬಚಾವ್ ಆಗಿದ್ದಾರೆ.
ಬೆಂಕಿಯನ್ನ ನಂದಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಅಗ್ನಿಶಾಮಕದಳ ಸ್ಥಳಕ್ಕೆ ಬರುವ ಹೊತ್ತಿಗೆ ಬೆಂಕಿ ಸಂಪೂರ್ಣ ಕಾರನ್ನು ಆವರಿಸಿತ್ತು. ಕೇವಲ 5 ನಿಮಿಷದಲ್ಲಿ ಸಂಪೂರ್ಣ ಕಾರು ಹೊತ್ತಿ ಉರಿದಿದೆ.ಬೆಂಕಿಗೆ ಕಾರು ಆಹುತಿಯಾಗಲು ಕಾರಣವೇನು ಅಂತ ತನಿಖೆಯಿಂದಷ್ಟೇ ತಿಳಿಯಬೇಕಿದೆ. ಯಶವಂತಪುರ ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.








