ಬೆಂಗಳೂರು : ಹುಬ್ಬಳ್ಳಿಯಲ್ಲಿ ನಡೆದ ಮಹಿಳೆ ವಿವಸ್ತ್ರ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ಮುಖ್ಯಮಂತ್ರಿಗಳ ಅನುಮತಿ ಪಡೆದು ಸಿಐಡಿಗೆ ವಹಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದರು.
ಪೊಲೀಸರ ಅಮಾನತಿಗೆ ವಿಪಕ್ಷ ನಾಯಕ ಆರ್.ಅಶೋಕ್ ಗಡುವು ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಹುಬ್ಬಳ್ಳಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಕೇಸ್ ಸಿಐಡಿಗೆ ಕೊಡಲು ಚರ್ಚೆ ನಡೆದಿದೆ. ಸಿಎಂ ಅನುಮತಿ ಪಡೆದು ಸಿಐಡಿ ತನಿಖೆಗೆ ಕೊಡ್ತೇವೆ. ಸಿಐಡಿ ತನಿಖೆಯ ನಂತರ ಸತ್ಯಾಸತ್ಯತೆ ಗೊತ್ತಾಗುತ್ತದೆ. ಮಹಿಳೆಯ ವಿವಸ್ತ್ರ ಪ್ರಕರಣದ ಬಗ್ಗೆ ಬಿಜೆಪಿಯವರು ಒಂದು, ನಮ್ಮವರು ಇನ್ನೊಂದು ರೀತಿ ಹೇಳುತ್ತಿದ್ದಾರೆ. ಹಾಗಾಗಿ, ಸಿಐಡಿ ತನಿಖೆಯಿಂದ ಎಲ್ಲವೂ ಹೊರಬರಲಿ ಎಂದರು.
ಸಿಐಡಿಯವರು ತನಿಖೆ ಮಾಡಿ ಸರ್ಕಾರಕ್ಕೆ ವರದಿ ಕೊಡಬೇಕು. ಆ ನಂತರ ಸರ್ಕಾರ ಯಾರು ತಪ್ಪಿತಸ್ಥರು, ಯಾರ ನಿರ್ಲಕ್ಷ್ಯವಿದೆ ಎಲ್ಲವನ್ನೂ ಪರಿಗಣಿಸಿ ಮುಂದಿನ ತೀರ್ಮಾನ ಮಾಡಲಿದೆ. ಮಹಿಳೆ ವಿವಸ್ತ್ರ ಆಗುವುದಕ್ಕೆ ಪೊಲೀಸರು ಬಿಟ್ಟಿಲ್ಲ. ಪೊಲೀಸರು ಕೂಡಲೇ ಕ್ರಮ ವಹಿಸಿದ್ದಾರೆ. ಪೊಲೀಸರು ವಿವಸ್ತ್ರಗೊಳಿಸಿಲ್ಲ, ಆಕೆಯೇ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿಯನ್ನು ನಿಮ್ಮೊಂದಿಗೆ ಈಗಾಗಲೇ ಹಂಚಿಕೊಂಡಿದ್ದೇನೆ. ವಿವರವಾಗಿ ತನಿಖೆ ಮಾಡಬೇಕಿದೆ ಎಂದು ಹೇಳಿದರು.








