ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಸಿಎಂ ಖುರ್ಚಿ ಕದನ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಾಮಿಸಿದೆ. ಬಿಹಾರ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಹೊರ ಬಾರದ ಕಾಂಗ್ರೆಸ್‌ಗೆ ಈಗ ರಾಜ್ಯದ ಕಾಂಗ್ರೆಸ್ ನಾಯಕರ ನಡವಳಿಕೆ ತೀವ್ರ ಬೇಸರ ಉಂಟು ಮಾಡುತ್ತಿದೆ.ಇದರ ಮಧ್ಯ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ತೆರಳಿದ್ದು, ನಾಯಕತ್ವ ಬದಲಾವಣೆ ಕುರಿತು ಮಾತಾಡಿ ಎಲ್ಲವನ್ನು ಸೆಟಲ್ ಮಾಡ್ತೀವಿ ಎಂದು ತಿಳಿಸಿದ್ದಾರೆ.
ದೆಹಲಿಗೆ ತೆರಳುವ ಮುಂಚೆ ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, ಎಲ್ಲವನ್ನು ಹೈಕಮಾಂಡ್ ಸಮ್ಮುಖದಲ್ಲಿ ಚರ್ಚಿಸುತ್ತೇನೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಜೊತೆ ಮಾತಾಡ್ತೀನಿ. ಹೈ ಕಮಾಂಡ್ ಜೊತೆ ಕೂತು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುತ್ತೆ. ಸಭೆಯಲ್ಲಿ ರಾಹುಲ್ ಗಾಂಧಿ ಸಹ ಇರುತ್ತಾರೆ. 3-4 ಪ್ರಮುಖ ನಾಯಕರನ್ನು ಕರೆಸಿ ಚರ್ಚಿಸುತ್ತೇನೆ. ಎಲ್ಲರ ಸಮ್ಮುಖದಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಎಂದರು.
ಈ ನಡುವೆ ರಾಜ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡಿರುವ ಹೈಕಮಾಡ್ ಇನ್ನೇರಡು ದಿನದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಕರೆದು ಮಾತನಾಡಲಿದ್ದಾರೆ ಎನ್ನಲಾಗಿದೆ. ಈ ಸಮಯದಲ್ಲಿ ಪ್ರಸಕ್ತ ರಾಜಕೀಯ ಬಿಕ್ಕಟ್ಟು ಸೇರಿದಂತೆ ಇತರೆ ಮಾಹಿತಿಗಳನ್ನು ಪಾರ್ಟಿಯ ಹಿರಿಯ ನಾಯಕರುಗಳ ಜೊತೆಗೆ ಚರ್ಚಿಸುತ್ತ ಅಂತಿಮ ನಿರ್ಧಾರಕ್ಕೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಬರಲಿದ್ದಾರೆ ಎನ್ನಲಾಗಿದೆ.
ಈ ನಡುವೆ ಇಂದು ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಭೇಟಿ ನೀಡಿದ್ದು, ಇದು ಹೊಸ ಚರ್ಚೆಗೆ ಕಾರಣವಾಗಿದೆ. ಇದಲ್ಲದೇ ಇಂದು ರಾಹುಲ್ ಗಾಂಧಿಯನ್ನು ಮಲ್ಲಿಕಾರ್ಜುನ ಖರ್ಗೆಯವರು ಭೇಟಿಯಾಗಲಿದ್ದು, ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.








