ಲಂಡನ್: ರಾಜ್ಯಕ್ಕೆ ಬಂಡವಾಳ ಹೂಡಿಕೆ ಸೆಳೆಯುವ ಉದ್ದೇಶದಿಂದ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಗ್ರೀನ್-ಜೆಟ್ಸ್, ನಥಿಂಗ್, ಫಿಡೋ ಎಐ, ರೋಡ್ಸ್ ಗ್ರೂಪ್, ಎಂಬಿಡಿಎ ಮುಂತಾದ ದಿಗ್ಗಜ ಕಂಪನಿಗಳೊಂದಿಗೆ ಎರಡನೆಯ ದಿನವಾದ ಮಂಗಳವಾರ ಮಾತುಕತೆ ನಡೆಸಿ, ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ.
ಇಲ್ಲಿನ ಫೋರ್ ಸೀಸನ್ ಹೋಟೆಲಿನಲ್ಲಿ ಮಾತುಕತೆ ನಡೆಸಿರುವ ಅವರು, ಡ್ರೋನ್ ಮತ್ತು ಮುಂದಿನ ತಲೆಮಾರಿನ ವಿಮಾನಗಳಿಗೆ ಬೇಕಾಗುವ ಅಧಿಕ ಸಾಮರ್ಥ್ಯದ ಎಲೆಕ್ಟ್ರಿಕ್ ಜೆಟ್ ಮತ್ತು ಡಕ್ಟೆಡ್-ಫ್ಯಾನ್ ಪ್ರೊಪಲ್ಶನ್ ತಯಾರಿಕೆಗೆ ಹೆಸರಾಗಿರುವ ಗ್ರೀನ್ ಜೆಟ್ಸ್ ಕಂಪನಿಯು ಬೆಂಗಳೂರಿಗೆ ಸಮೀಪವಿರುವ ಜಾಗದಲ್ಲಿ ತನ್ನ ಉತ್ಪಾದನಾ ಘಟಕ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದೆ. ನಾವು ಕೂಡ ಆದ್ಯತೆಯ ಮೇಲೆ ಭೂಮಿ ಒದಗಿಸುವ ಭರವಸೆ ನೀಡಿದ್ದೇವೆ ಎಂದಿದ್ದಾರೆ.
ಫಿಡೋ ಎಐ ಕಂಪನಿ ಕೂಡ ಕರ್ನಾಟಕದಲ್ಲಿ ತನ್ನದೊಂದು ತಯಾರಿಕಾ ಘಟಕ ಆರಂಭಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದೆ ಎಂದು ಅದರ ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ವಿನ್ಯಾಸಕ್ಕೆ ಹೆಚ್ಚಿನ ಮಹತ್ತ್ವವಿರುವ ಸ್ಮಾರ್ಟ್ ಫೋನ್ ತಯಾರಿಸುವ ನಥಿಂಗ್ ಕಂಪನಿಯೊಂದಿಗಿನ ಚರ್ಚೆಯಲ್ಲಿ ರಾಜ್ಯದಲ್ಲಿ ಒಂದು ತಯಾರಿಕಾ ಸ್ಥಾವರ ಸ್ಥಾಪಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಉನ್ನತ ಎಂಜಿನಿಯರಿಂಗ್ ವಲಯದಲ್ಲಿ ಹೆಸರು ಮಾಡಿರುವ ರೋಡ್ಸ್ ಗ್ರೂಪ್ ಜತೆಗಿನ ಮಾತುಕತೆಯಲ್ಲಿ, ಕಂಪನಿಯ ಉನ್ನತ ಮಟ್ಟದ ನಿಯೋಗವು ಆದಷ್ಟು ಬೇಗ ಕರ್ನಾಟಕಕ್ಕೆ ಭೇಟಿ ನೀಡಬೇಕೆಂದು ಆಹ್ವಾನಿಸಲಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.
ಈ ಮಾತುಕತೆಗಳಲ್ಲಿ ಗ್ರೀನ್ ಜೆಟ್ಸ್ ಸಿಇಒ ಅನ್ಮೋಲ್ ಮನೋಹರ್, ಫಿಡೋ ಎಐ ಸಹ ಸಂಸ್ಥಾಪಕಿ ವಿಕ್ಟೋರಿಯಾ ಎಡ್ವರ್ಡ್ಸ್, ನಥಿಂಗ್ ಕಂಪನಿಯ ಜಾಗತಿಕ ಕಾರ್ಯತಂತ್ರ ನಿರ್ದೇಶಕಿ ಟಮೀನಾ, ರೋಡ್ಸ್ ಗ್ರೂಪ್ ಸಿಇಒ ಮಾರ್ಕ್ ರಿಡ್ಜ್ವೇ ಮತ್ತು ಎಂಬಿಡಿಎ ಕಂಪನಿಯ ಭಾರತೀಯ ಪ್ರಾದೇಶಿಕ ವ್ಯವಹಾರಗಳ ಮುಖ್ಯಸ್ಥ ಟಾಮ್ ಫೆಲ್ ಪಾಲ್ಗೊಂಡಿದ್ದರು.
ಕೈಗಾರಿಕಾ ಇಲಾಖೆ ಪ್ತಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಮತ್ತಿತರರು ನಿಯೋಗದಲ್ಲಿ ಇದ್ದಾರೆ.
BIG NEWS : ರಾಜ್ಯದಲ್ಲಿ ಅವಕಾಶ ಸಿಕ್ಕರೆ ದಲಿತರನ್ನು ‘CM’ ಮಾಡುತ್ತೇವೆ : ಸಚಿವ ಕೆಜೆ ಜಾರ್ಜ್ ಹೇಳಿಕೆ
ಸೂಕ್ತ ಸಮಯದಲ್ಲಿ ನಾನು ಎಲ್ಲಾ ಮಾತನಾಡುತ್ತೇನೆ: ನಿರ್ದೋಷಿ ತೀರ್ಪು ಬಳಿಕ ಮುರುಘಾ ಶ್ರೀ ಮೊದಲ ಪ್ರತಿಕ್ರಿಯೆ








