ಬೆಂಗಳೂರು : ದುಬೈ ನಿಂದ ಅಕ್ರಮವಾಗಿ ಸುಮಾರು 14 ಕೆಜಿ ಹೆಚ್ಚು ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿ ಆರ್ ಐ ಅಧಿಕಾರಿಗಳು ಇದೀಗ ನಟಿ ರನ್ಯಾರಾವ್ ಸೇರಿದಂತೆ ನಾಲ್ವರ ವಿರುದ್ಧ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದರು.
ಹೌದು ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣ ಸಂಬಂಧ ತನಿಖೆ ಪೂರ್ಣಗೊಳಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ನಟಿ ರನ್ಯಾರಾವ್ ಸೇರಿ ನಾಲ್ವರು ಆರೋಪಿಗಳ ವಿರುದ್ಧ ನಗರದ ವಿಶೇಷ ಆರ್ಥಿಕ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ಬಂಧನಕೊಳ್ಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ರನ್ಯಾರಾವ್ ಮತ್ತು ಆಕೆಯ ಸ್ನೇಹಿತ ತರುಣ್ ಕೊಂಡರಾಜು ಹಾಗೂ ಅವರಿಂದ ಚಿನ್ನ ಖರೀದಿಸಿದ್ದ ಸಕಾರಿಯಾ ಜೈನ್ ಮತ್ತು ಭರತ್ ಕುಮಾರ್ ಜೈನ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಆರೋಪಪಟ್ಟಿಯು 2,200 ಪುಟಗಳನ್ನು ಹೊಂದಿದ್ದು, ಅದರಲ್ಲಿ 350 ಪುಟಗಳ ಸಾಕ್ಷಿಗಳ ಹೇಳಿಕೆಯನ್ನು ಪಡೆಯಲಾಗಿದೆ.
ಚಾರ್ಜ್ ಶೀಟ್ ನಲ್ಲಿ ಏನಿದೆ?
2025ರ ಮಾರ್ಚ್ 3ರ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14 ಕೆಜಿ ಚಿನ್ನದ ಗಟ್ಟಿಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದಾಗ ರನ್ಯಾ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಯಿತು. ನಂತರ, ಇತರ ಮೂವರು ಆರೋಪಿಗಳನ್ನು ಬಂಧಿಸಲಾಯಿತು. ಭರತ್ ಕುಮಾರ್ ಜೈನ್ ಹೊರತುಪಡಿಸಿ, ರನ್ಯಾ, ತರುಣ್ ಮತ್ತು ಸಾಹಿಲ್ ವಿರುದ್ಧ ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ (ಕಾಫಿಪೋಸಾ) ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.








