ಶಿವಮೊಗ್ಗ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳು ಎಣ್ಣೆ ಹೊಡೆಯುತ್ತಾ ಮದ್ಯದ ನಶೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿರುವಾಗಲೇ ಶಿವಮೊಗ್ಗ ಜೈಲಿನಲ್ಲಿ ಬಾಳೆಗೊನೆ ಜೊತೆಗೆ ಗಾಂಜಾ ಮತ್ತು ಸಿಗರೇಟ್ ಗಳನ್ನು ಸಾಗಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೌದು ಶಿವಮೊಗ್ಗದ ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಗುರುವಾರ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಜೈಲಿನ ಆವರಣದಲ್ಲಿ 293 ಗ್ರಾಂ ಒಣ ಗಾಂಜಾ ಹಾಗೂ 40 ಸಿಗರೇಟ್ಗಳು ಪತ್ತೆಯಾಗಿವೆ. ಬಾಳೆಗೊನೆ ಹಾಗೂ ಒಳ ಉಡುಪಿನಲ್ಲಿ ಗಾಂಜಾ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ನಿನ್ನೆ ಮಧ್ಯಾಹ್ನ ಆಟೋ ಚಾಲಕ ಕಾರಾಗೃಹದ ಮುಖ್ಯದ್ವಾರದ ಬಳಿ ಬಂದು, ಜೈಲಿನ ಕ್ಯಾಂಟೀನ್ನವರು ಆರ್ಡರ್ ಮಾಡಿದ್ದರು ಎಂದು ಹೇಳಿ ಮೂರು ಬಾಳೆಹಣ್ಣಿನ ಗೊನೆಗಳನ್ನು ಇಳಿಸಿ ವಾಪಸ್ ಹೋಗಿದ್ದ.
ಈ ವೇಳೆ ಕಾರಾಗೃಹದ ಕಾವಲು ಉಸ್ತುವಾರಿಯಾದ ಕರ್ನಾಟಕ ರಾಜ್ಯ ಕೈಗಾರಿಕ ಭದ್ರತಾ ಪಡೆಯ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಪ್ರೋಫೆಸನರಿ ಪಿಎಸ್ಐ ಪ್ರಭು ಎಸ್. ಹಾಗೂ ಸಿಬ್ಬಂದಿಯಾದ ಪ್ರವೀಣ ಹಾಗೂ ನಿರೂಬಾಯಿ ಬಾಳೆಹಣ್ಣಿನ ಗೊನೆ ಚೆಕ್ ಮಾಡಿದಾಗ, ಅದರ ದಿಂಡಿನ ಒಳಗೆ ಗಾಂಜಾ ಹಾಗೂ ಸಿಗರೇಟ್ ಅನ್ನು ಕಪ್ಪು ಬಣ್ಣದ ಟೇಪ್ನಲ್ಲಿ ಸುತ್ತಿ ಇಟ್ಟಿರುವುದು ಪತ್ತೆಯಾಗಿದೆ.
ಕೇಂದ್ರ ಕಾರಾಗೃಹದ ಎಸ್ಡಿಎವೋರ್ವ ಕಾರಾಗೃಹದ ಒಳಗಡೆಯೇ ಗಾಂಜಾ ಸಾಗಿಸುತ್ತಿದ್ದ ವೇಳೆ ತಪಾಸಣೆ ನಡೆಸುತ್ತಿದ್ದ KSISF ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ. ಗುರುವಾರ ಬೆಳಗ್ಗೆ ಎಸ್ಡಿಎ ಸಾತ್ವಿಕ್ (25) ಕರ್ತವ್ಯಕ್ಕೆ ಹಾಜರಾಗುವ ವೇಳೆ ಕಾರಾಗೃಹದ ಭದ್ರತೆ ಹೊಣೆ ಹೊತ್ತಿರುವ KSISF ಸಿಬ್ಬಂದಿಯು ತಪಾಸಣೆ ನಡೆಸಿದಾಗ ಆತನ ಬಳಿ 170 ಗ್ರಾಂ ಗಾಂಜಾ ಪತ್ತೆಯಾಗಿದೆ. ಸಾತ್ವಿಕ್ ತನ್ನ ಒಳ ಉಡುಪಿನಲ್ಲಿ ಗಾಂಜಾ ಸಾಗಿಸುತ್ತಿರುವುದು ಗೊತ್ತಾಗಿದೆ.








