ಬೆಂಗಳೂರು : ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಕೇಂದ್ರದ ಜೊತೆಗೆ ವಿಶ್ವಾಸದಲ್ಲಿ ಸೌಹಾರ್ದತೆಯಲ್ಲಿ ಅನುಮತಿ ಪಡೆದರೆ ಮುಂದೆ ಕಾನೂನು ಹೋರಾಟದಲ್ಲಿ ಅನುಕೂಲವಾಗಲಿದೆ. ಇದರಲ್ಲಿ ರಾಜಕೀಯ ಬೆರೆಸಿದರೆ, ರಾಜಕೀಯ ಪ್ರತಿಷ್ಠೆ ಮಾಡಿದರೆ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಇದು ಬಹಳ ವರ್ಷದ ರಾಜ್ಯದ ಜನರ ಕನಸಾಗಿದೆ. ಇದು 1996ರಿಂದ ಆರಂಭವಾಗಿದ್ದು. ಪವರ್ ಪ್ರಾಜೆಕ್ಟ್ ನಿಂದ ಆರಂಭವಾಗಿದ್ದು. ನಾನು ನೀರಾವರಿ ಸಚಿವ ಆಗಿದ್ದಾಗ ಬಹಳಷ್ಟು ಪ್ರದೇಶ ಮುಳುಗಡೆ ಆಗುತ್ತದೆ ಅಂತ ಕೇಳಿಬಂದಿತ್ತು. ಅದನ್ನು ಬದಲಾವಣೆ ಮಾಡಿ ಡಿಪಿಆರ್ ಸಿದ್ದ ಪಡೆಸಿದ್ದೇವು. ಕಾಂಗ್ರೆಸ್ ನವರು ಪಾದಯಾತ್ರೆ ಮಾಡದಿದ್ದರೆ ಇಷ್ಟೋತ್ತಿಗೆ ಯೋಜನೆ ಒಂದು ಹಂತಕ್ಕೆ ಬರುತ್ತಿತ್ತು. ಇವರು ಪಾದಯಾತ್ರೆ ಮಾಡಿದ್ದರಿಂದ ತಮಿಳುನಾಡಿನವರು ಮಿಸ್ ಲೀನಿಯಸ್ ಕೇಸ್ ಹಾಕಿದ್ದಾರೆ.
ತಮಿಳುನಾಡು ಕೇಸು ನಿಲ್ಲುವುದಿಲ್ಲ ಎಂದು ನಮಗೆ ಗೊತ್ತಿದೆ. ಆದ್ದರಿಂದ ನಾವು ಬಹಳ ಬುದ್ದಿವಂತಿಕೆಯಿಂದ ಎಲ್ಲ ಹಂತಗಳನ್ನು ಮುಗಿಸಿಕೊಳ್ಳಬೇಕು. ಯಾಕೆಂದರೆ ಈಗ ನಡೆಯುವ ಬೆಳವಣಿಗೆಯಲ್ಲಿ ಏನಾದರೂ ವ್ಯತ್ಯಾಸವಾದರೆ ತಮಿಳುನಾಡಿನವರು ಮತ್ತೆ ಕೋರ್ಟ್ ಗೆ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಇದನ್ನು ಸಿಡಬ್ಲ್ಯುಸಿಯಲ್ಲಿ ಒಪ್ಪಿಗೆ ನೀಡಬೇಕಾದರೆ ಸಿಡಬ್ಲ್ಯುಎಂಎ ದಲ್ಲಿ ಒಪ್ಪಿಗೆ ನೀಡಬೇಕಾಗುತ್ತದೆ. ಅಪ್ರೂವಲ್ ಕೊಡುವಾಗ ಎಲ್ಲಿ ನಿಂತಿತ್ತೋ, ಅಲ್ಲಿಂದಲೇ ಪ್ರಾರಂಭ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ರಾಜ್ಯ ಸರ್ಕಾರ ಕೇಂದ್ರದ ಜೊತೆಗೆ ವಿಶ್ವಾಸದಲ್ಲಿ ಸೌಹಾರ್ದತೆಯಲ್ಲಿ ಈ ಮಹತ್ವದ ಯೋಜನೆಗೆ ಅನುಮತಿ ಪಡೆದರೆ ಮುಂದೆ ಕಾನೂನು ಹೋರಾಟದಲ್ಲಿ ಅನುಕೂಲವಾಗಲಿದೆ. ಇದರಲ್ಲಿ ರಾಜಕೀಯ ಬೆರೆಸಿದರೆ, ರಾಜಕೀಯ ಪ್ರತಿಷ್ಟೇ ಮಾಡಿದರೆ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ಹೇಳಿದರು.
ಮೆಕ್ಕೆಜೋಳ ಖರೀದಿ ಆರಂಭಿಸಲಿ
ಮೆಕ್ಕೆಜೋಳವನ್ನು ಕರ್ನಾಟಕದ ಬಹುತೇಕ ಭಾಗದಲ್ಲಿ ಬೆಳೆಯುತ್ತಾರೆ. ಕಳೆದ ವರ್ಷ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಬೆಳೆಯಲಾಗಿತ್ತು. ಈ ವರ್ಷ 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದ್ದಾರೆ. ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಈ ವರ್ಷ ಬೆಳೆದಿರುವ ಬೆಳೆಗೆ ಸರಿಯಾದ ಬೆಲೆ ಸಿಕ್ಕಿಲ್ಲ. ಕಳೆದ ವರ್ಷ ಪ್ರತಿ ಕ್ವಿಂಟಾಲ್ ಗೆ 2 ಸಾವಿರ ರೂ. ಮೇಲೆ ಇತ್ತು. ಈ ವರ್ಷ ಬೆಲೆ ಕುಸಿದು ಪ್ರತಿ ಕ್ವಿಂಟಾಲ್ ಗೆ 1400 ರೂ.ಗೆ ಇಳಿದಿದೆ. ಹಾಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವ್ಯಾಪಕವಾಗಿ ಮೆಕ್ಕೆಜೋಳ ಬೆಳೆದಿರುವ ಅತಿ ಹೆಚ್ಚು ರೈತರ ಬದುಕಿನ ಪ್ರಶ್ನೆ ಇದೆ. ಕಬ್ಬು ಆರೇಳು ಜಿಲ್ಲೆಗೆ ಸೀಮಿತ ಇದ್ದರೆ, ಮೆಕ್ಕೆಜೋಳ19-20 ಜಿಲ್ಲೆಯಲ್ಲಿ ಇದೆ. ಈಗಾಗಲೇ ಕೇಂದ್ರ ಸರ್ಕಾರ 2400 ರೂ. ಎಂಎಸ್ ಪಿ ಮಾಡಿದೆ. ಅದಕ್ಕಿಂತ ಹೆಚ್ಚಿಗೆ ಬೆಲೆ ನೀಡಿ ಖರೀದಿ ಮಾಡಬೇಕು. ರಾಜ್ಯ ಸರ್ಕಾರದ ಅಧಿಕಾರಿಗಳು ಕೇಂದ್ರಕ್ಕೆ ವರದಿ ಕಳುಹಿಸುತ್ತೇವೆ ಅಂತ ಹೇಳುತ್ತಾರೆ. ಅದರ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರ ಖರೀದಿ ಮಾಡಿದರೆ ಕೇಂದ್ರ ಸರ್ಕಾರ ಬೇಡ ಎನ್ನುವುದಿಲ್ಲ. ಹಿಂದೆ ರಾಜ್ಯ ಸರಕಾರ ಖರೀದಿ ಮಾಡಿ ಕೇಂದ್ರಕ್ಕೆ ವರದಿ ಕಳುಹಿಸಿದ ಹಲವಾರು ಉದಾಹರಣೆಗಳಿವೆ.
ಮೆಕ್ಕೆಜೋಳ ಹಾಳಾಗದ ವಸ್ತು ಅದನ್ನು ಇಟ್ಟು ದರ ಬಂದಾಗ ಮಾರಾಟ ಮಾಡಿ ಹಣ ವಾಪಸ್ ಪಡೆಯಬಹುದು ವ್ಯತ್ಯಾಸ ಆದರೆ ಕೇಂದ್ರ ಸರ್ಕಾರ ಹಣ ಕೊಡುತ್ತದೆ. ಆದ್ದರಿಂದ ತಡಮಾಡದೇ ರೈತರು ಬೀದಿಗಿಳಿದು ಹೋರಾಟ ಮಾಡುವುದುವುದಕ್ಕೆ ಅವಕಾಶ ನೀಡದೇ ಕೂಡಲೇ ಮೆಕ್ಕೆ ಜೋಳ ಖರೀದಿ ಮಾಡಬೇಕು, ರೈತರ ಪರ ನಿಲ್ಲಬೇಕು. ಇದವರೆಗೂ ರಾಜ್ಯ ಸರ್ಕಾರ ನಡೆದು ಬಂದ ರೈತ ವಿರೋಧಿ ನಿಲುವು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಜನರ ಪರ ಕೆಲಸ ಮಾಡಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಪ್ರಧಾನಿಯವರನ್ನು ಭೇಟಿ ಮಾಡಿರುವ ಸಂಪೂರ್ಣ ಮಾಹಿತಿ ನೀಡಿದರೆ ನಮ್ಮಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರ ಜನರ ಸಮಸ್ಯೆಗಳ ಬಗ್ಗೆ ಯೋಚಿಸದೆ ಸಂಪುಟ ಪುನಾರಚನೆ, ಸಿಎಂ ಬದಲಾವಣೆಯಲ್ಲಿ ಮುಳುಗಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಈಗಲಾದರೂ ಪುನರ್ ರಚನೆ, ಸಿಎಂ ಬದಲಾವಣೆ ವಿಚಾರ ಬದಿಗಿಟ್ಟು ಜನರ ಪರ ಕೆಲಸ ಮಾಡಲಿ ಎಂದು ಆಗ್ರಹಿಸಿದರು.








