ಬೆಂಗಳೂರು : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದ್ದು ಕೆಲಸ ಕೊಟ್ಟ ಮಾಲೀಕ ದೇವರಂತೆ ಎನ್ನುವ ಮಾತಿದೆ. ಆದರೆ ಇಲ್ಲಿ ಚಿನ್ನದಾಸೆಗೆ ಮಾಲೀಕನಿಗೆ ಚಾಕುವಿನಿಂದ ಇರಿದು ನಡುರಸ್ತೆಯಲ್ಲಿ ಚಿನ್ನದ ಚೈನ್ ದೋಚಿಕೊಂಡು ಪರಾರಿಯಾಗಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸೂಲಿಕೆರೆ ಬಳಿ ನಡೆದಿದೆ.
ಕಡಿಮೆ ಬೆಲೆಗೆ ನಿವೇಶನಗಳು ಮಾರಾಟಕ್ಕಿದ್ದು, ಅವುಗಳನ್ನು ತೋರಿಸುವುದಾಗಿ ಕಾರ್ಖಾನೆ ಮಾಲೀಕನನ್ನು ನಂಬಿಸಿ ಕರೆದುಕೊಂಡು ಹೋಗಿದ್ದ ಆರೋಪಿ ಈ ಕೃತ್ಯ ಎಸೆಗಿದ್ದಾನೆ. ಗಣೇಶ ಮೂರ್ತಿ ತಯಾರಿಸುವ ಕಾರ್ಖಾನೆ ಮಾಲೀಕ ಅಮರ್ ನಾರಾಯಣಸ್ವಾಮಿ ಗಾಯಗೊಂಡವರು. ಜಯಂತ್ (23) ಹಲ್ಲೆ ನಡೆಸಿ ಪರಾರಿಯಾದ ಆರೋಪಿ.
ಅಮರ್ ಅವರಿಗೆ ಆರೋಪಿಯು ಚಾಕುವಿನಿಂದ ಕುತ್ತಿಗೆ, ಭುಜ, ಹಣೆಗೆ ಇರಿದು ಗಾಯಗೊಳಿಸಿ ಅವರ ಕೊರಳಿನಲ್ಲಿದ್ದ 100 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳು ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.








