ಬಾಗಲಕೋಟೆ : ಮುಂದಿನ ತಿಂಗಳು ಅಂದರೆ ನವೆಂಬರ್ ನಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ ಆಗಲಿದೆ ಎಂದು ಚರ್ಚೆಗಳು ನಡೆಯುತ್ತಿವೆ. ನಾಯಕತ್ವ ಬದಲಾವಣೆ ಆಗಿರಬಹುದು ಅಥವಾ ಸಚಿವ ಸಂಪುಟ ಪುನರಚನೆ ಎಲ್ಲವೂ ಕೂಡ ಬದಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದೀಗ ನಾನು ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿದ್ದು, ನಾನು ಕೂಡ ಮಂತ್ರಿ ಆಗಬಹುದು ಎಂಬ ನಿರೀಕ್ಷೆ ಇದೆ. ಸಚಿವ ಸಂಪುಟ ಪುನಾರಚನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವರಿಷ್ಠರ ಅನುಮತಿ ಪಡೆದು ಪುನಾರಚನೆ ಮಾಡುವುದಾಗಿ ಹೇಳಿದ್ದಾರೆ. ಈಗಾಗಲೇ ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂದು ವಿಜಯಾನಂದ ಕಾಶಪ್ಪನವರು ತಮ್ಮ ಮಂತ್ರಿ ಆಸೆ ಬಿಚ್ಚಿಟ್ಟರು.








