ಬೆಂಗಳೂರು : ಇತ್ತೀಚಿಗೆ ಬೆಂಗಳೂರು ನಗರದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಕಚೇರಿ ಹಾಗೂ ಶಾಲೆಗಳು ಸೇರಿ ಇತರೆಡೆ ಹುಸಿ ಬಾಂಬ್ ಬೆದರಿಕೆ ಮೂಲಕ ಆತಂಕ ಸೃಷ್ಟಿಸಿರುವ ದುಷ್ಕರ್ಮಿಗಳ ಪತ್ತೆಗೆ ಜಂಟಿ ಪೊಲೀಸ್ ಆಯುಕ್ತರ ಮೇಲುಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಯಾಗಿದೆ.
ಈ ಹುಸಿ ಬಾಂಬ್ ಬೆದರಿಕೆ ಬೆಂಗಳೂರು- 34, ಮುಂಬೈ- 27, ಚೆನ್ನೈ-22, ಕೇಂದ್ರ ತನಿಖಾ ದಳ (ಸಿಬಿಐ)-2 ಹಾಗೂ ದೆಹಲಿ-20 ಸೇರಿ ರಾಷ್ಟ್ರವ್ಯಾಪಿ 100ಕ್ಕೂ ಹೆಚ್ಚಿನ ದಿ ಪ್ರಕರಣಗಳು ದಾಖಲಾಗಿವೆ. ಆದರೆ ಈವರೆಗೆ ಆರೋಪಿಗಳ ಮೂಲ ಪತ್ತೆಯಾಗಿಲ್ಲ. ಹೀಗಾಗಿ ಈಗ ರಾಜ್ಯ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಜಂಟಿಯಾಗಿ ಕಾರ್ಯಾಚರಣೆಗಿಳಿದಿವೆ.
ಭೀತಿ ಸೃಷ್ಟಿಕರ್ತರ ಪತ್ತೆಗೆ ತಮ್ಮ ಮೇಲುಸ್ತುವಾರಿಯಲ್ಲಿ ಡಿಸಿಪಿ ನೇತೃತ್ವದಲ್ಲಿ ಎಸ್‌ಐಟಿಯನ್ನು ಜಂಟಿ ಪೊಲೀಸ್ ಆಯುಕ್ತ (ಪಶ್ಚಿಮ) ವಂಶಿಕೃಷ್ಣ ರಚಿಸಿದ್ದಾರೆ. ಕೇಂದ್ರ ಹಾಗೂ ಹೊರ ರಾಜ್ಯಗಳ ಪೊಲೀಸರ ಸಹಭಾಗಿತ್ವದಲ್ಲಿ ಆರೋಪಿಗಳನ್ನು ಹಿಡಿಯಲು ಎಸ್‌ಐಟಿ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಕೆಲ ಮಾಹಿತಿ ಸಹ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.