ಮೈಸೂರು: ಆರ್ಥಿಕ- ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ರಾಜ್ಯ ಸರಕಾರವು ಜಾತಿ ಜನಗಣತಿ ಮಾಡುತ್ತಿದ್ದು, ದಿನೇದಿನೇ ಇದರಿಂದ ಗೊಂದಲಗಳು ಹೆಚ್ಚಾಗುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು ಪ್ರಶ್ನೆಗೆ ಉತ್ತರಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ರತಿಕ್ರಿಯೆಯನ್ನು ನೋಡಿದಾಗಲೇ ಇದು ಗೊತ್ತಾಗುತ್ತದೆ. 60 ಪ್ರಶ್ನೆಗಳನ್ನು ಜನಸಾಮಾನ್ಯರ ಮುಂದೆ ಇಟ್ಟಿದ್ದಾರೆ. ಎಲ್ಲ ಸಮಾಜಗಳಲ್ಲೂ ಗೊಂದಲ ಸೃಷ್ಟಿಯಾಗಿದೆ. ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ರಾಜ್ಯ ಸರಕಾರ ಈ ನಿರ್ಣಯ ಮಾಡಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ನುಡಿದರು.
ವಿಕಲಚೇತನರನ್ನೂ ಇದಕ್ಕೆ ಜೋಡಿಸಿದ್ದಾರೆ. ಇದರ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ರಾಜ್ಯ ಸರಕಾರ ಅಥವಾ ಮುಖ್ಯಮಂತ್ರಿಗಳಿಗೆ ಇಷ್ಟೊಂದು ಆತುರ ಯಾಕೆ ಎಂದು ಕೇಳಿದರು. ನವೆಂಬರ್ ಕ್ರಾಂತಿ- ಅಕ್ಟೋಬರ್ ಕ್ರಾಂತಿ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆ ನಡೆದಿದೆ. ರಾಜ್ಯದ ರಾಜಕಾರಣದಲ್ಲಿ ಆಗುವ ಕ್ರಾಂತಿಗೂ, ಈ ಜಾತಿ ಜನಗಣತಿಗೂ ಎಲ್ಲೋ ಒಂದು ಕಡೆ ಸಂಬಂಧ ಇದೆಯೇ ಎಂಬುದೂ ರಾಜ್ಯದಲ್ಲಿ ಚರ್ಚೆ ಆಗುತ್ತಿದೆ ಎಂದು ವಿಶ್ಲೇಷಿಸಿದರು.
ಸರಕಾರ ಆರ್ಥಿಕ- ಸಾಮಾಜಿಕ- ಶೈಕ್ಷಣಿಕ ನ್ಯಾಯ ನೀಡಲಿ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕೆಂಬ ವಿಚಾರದಲ್ಲಿ ಬಿಜೆಪಿಯಲ್ಲಿ ಗೊಂದಲ ಇಲ್ಲ. ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜೀ ಅವರು ಒಂದು ಐತಿಹಾಸಿಕ ನಿರ್ಧಾರವನ್ನು ಘೋಷಿಸಿದ್ದಾರೆ. ಸ್ವಾತಂತ್ರ್ಯ ಬಂದ ನಂತರದಲ್ಲಿ ಯಾವುದೇ ಪ್ರಧಾನಮಂತ್ರಿಗಳು ನಿರ್ಧಾರ ಮಾಡದೇ ಇರುವಂಥ ನಿರ್ಧಾರ ಇದಾಗಿದೆ. ಇಡೀ ದೇಶದಲ್ಲಿ ಜಾತಿ ಜನಗಣತಿ ಪ್ರಾರಂಭಿಸುವುದಾಗಿ ಪ್ರಕಟಿಸಿದ್ದಾರೆ. ಇದರ ನಡುವೆ ಕರ್ನಾಟಕದಲ್ಲಿ ಈ ರೀತಿ ಗೊಂದಲವನ್ನು ಸೃಷ್ಟಿ ಮಾಡುವ ಅವಶ್ಯಕತೆ ಇರಲಿಲ್ಲ ಎಂದರು.
ಕ್ರಾಂತಿ ಕುರಿತು ಸಚಿವರ ಬಹಿರಂಗ ಹೇಳಿಕೆ
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ಸಿದ್ದರಾಮಯ್ಯನವರು ಬಹಳ ಆತುರದಲ್ಲಿದ್ದಾರೆ. ಎರಡು ತಿಂಗಳ ಹಿಂದೆ ಮೈಸೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದರು. ಸಿದ್ದರಾಮಯ್ಯನವರು ರ್ಯಾಂಪ್ ವಾಕ್ ಮಾಡುತ್ತಿದ್ದರು. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‍ಗೆ ಅಡ್ರೆಸ್ ಇರಲಿಲ್ಲ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ಸಿನ ಹಿರಿಯ ಸಚಿವರೇ ನವೆಂಬರ್ ಕ್ರಾಂತಿ- ಅಕ್ಟೋಬರ್ ಕ್ರಾಂತಿ ಕುರಿತು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಬಿಹಾರ ಚುನಾವಣೆ ಬಳಿಕ ಸಾಕಷ್ಟು ರಾಜಕೀಯ ಬದಲಾವಣೆ..
ಎಐಸಿಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಬೇಡಿ ಎನ್ನುತ್ತಾರೆ. ನಾಯಕತ್ವ ಬದಲಾವಣೆ ಇಲ್ಲ ಎಂದು ಕಾಂಗ್ರೆಸ್ ವರಿಷ್ಠರೂ ಹೇಳಿಲ್ಲ. ಬಿಹಾರ ಚುನಾವಣೆ ಬಳಿಕ ಸಾಕಷ್ಟು ರಾಜಕೀಯ ಬದಲಾವಣೆಗಳು ರಾಜ್ಯದಲ್ಲಿ ಆಗಲಿದೆ. ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಆಗುವುದು ಸ್ಪಷ್ಟ ಎಂದು ತಿಳಿಸಿದರು.
ಉತ್ತರ ಕರ್ನಾಟಕ, ಅದರಲ್ಲೂ ಪ್ರಮುಖವಾಗಿ ಕಲ್ಯಾಣ ಕರ್ನಾಟಕದಲ್ಲಿ ಭೀಕರ ಮಳೆಯಿಂದ ರೈತರು ಬೀದಿಗೆ ಬಂದಿದ್ದಾರೆ. ತೊಗರಿ, ಸೋಯಾಬೀನ್, ಬೇಳೆ ಕಾಳುಗಳು ಸಂಪೂರ್ಣ ನಾಶವಾಗಿವೆÉ. ರೈತರು ಕಂಗಾಲಾಗಿದ್ದಾರೆ. ಬಡವರು ಮನೆ ಕಳೆದುಕೊಂಡಿದ್ದಾರೆ. ಕೃಷಿ ಸಚಿವರು, ಕಂದಾಯ ಸಚಿವರು, ಉಸ್ತುವಾರಿ ಸಚಿವರು ಇದರ ಬಗ್ಗೆ ಗಮನಿಸುತ್ತಿಲ್ಲ ಎಂದು ಟೀಕಿಸಿದರು. ರಾಜ್ಯ ಸರಕಾರ ಹೇಳಿಕೆಗಳಿಗೆ ಸೀಮಿತವಾಗದೇ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಆಗ್ರಹಿಸಿದರು.