ಈತ ವೀರೇಶ. ನನ್ನ ತಮ್ಮನ ಮಗ. ಮೊಬೈಲ್ ಎಂದರೆ ಎಲ್ಲರಂತೆ ಈತನಿಗೂ ಪ್ರೀತಿ ಮತ್ತು ಅದಕ್ಕಾಗಿ ಹಠ. ಮೊಬೈಲ್ ಅನುಕೂಲಕ್ಕಿಂತ ಅನಾನುಕೂಲಮಾಡಿದ್ದೆ ಹೆಚ್ಚು. ಅದಕ್ಕಾಗಿ ಒಂದು ಐಡಿಯಾ ಮಾಡಿದೆ.
ಚುಕ್ಕಿ ಚಿಕ್ಕವಳಿದ್ದಾಗ ಅವಳಲ್ಲಿ ಸೃಜನಶೀಲ ಆಸಕ್ತಿ ಬೆಳೆಸಬೇಕೆಂಬ ಇಚ್ಛೆಯಿಂದ ಈ ಐಡಿಯಾ ಮಾಡಿದ್ದೆ. ಅದು ಸಂಪೂರ್ಣ ಯಶಸ್ಸು ಕೊಟ್ಟಿತ್ತು. ಆ ಐಡಿಯಾವನ್ನ ನಮ್ಮ ವೀರೇಶನಿಗೂ ಬಳಸಿದೆ.
ಸುಮ್ಮನೆ ಒಂದು ಗೋಡೆಯ ಮೇಲೆ ಒಂದು ಕಾರ್ಡ್ ಶೀಟನ್ನು ಅಂಟಿಸಿ. ಅದರ ಪಕ್ಕದಲ್ಲೇ ಕೆಲವು ಬಣ್ಣದ ಸ್ಕೆಚ್ ಪೆನ್ ಗಳನ್ನ ಇಟ್ಟಿದ್ದೆ. ವೀರೇಶ ಬಂದವನೇ ಆ ಕಾರ್ಡ್ ಶೀಟನ್ನ ಖುಷಿಯಿಂದ ನೋಡಿದ. ಸ್ಕೆಚ್ ಪೆನ್ ಕೈಯಲ್ಲಿ ಹಿಡಿದು “ದೊಡ್ಡಪ್ಪ ಏನ್ ಬರೀಲಿ?” ಎಂದ. ನಾನು “ಏನಾದರೂ ಬರೀ ಮಗು, ನಿನಗೆ ಇಷ್ಟಬಂದಿದ್ದು, ಏನಾದರೂ ಬರೀ… ಇಷ್ಟಾದರೂ ಬರೀ ” ಎಂದೆ. ಖುಷಿಗೊಂಡ.
ಬರೀತಾ ಬರೀತಾ ಅವನು ಅದರಲ್ಲಿ ತಲ್ಲೀನನಾದ… ದೊಡ್ಡಪ್ಪ ಇದು ಅಜ್ಜ, ಇದು ಮನಿ, ಇದು ಟಿವಿ, ಇದು ನಾಯಿ, ಇದು ಮನಿ… ಅವನು ಬರೀತಾ ಬರೀತಾ ಮಾತಾಡುತ್ತಾ ಹೇಳುತ್ತಾ ಬರೆಯುತ್ತಾ ಹೋದ… ಸುಮಾರು ಹೊತ್ತು ಬರೆಯುತ್ತಲೇ ಇದ್ದ.
ಈ ಚಟುವಟಿಕೆ ತುಂಬಾ ಮಹತ್ವದ್ದು. ಮಕ್ಕಳ ಮಾನಸಿಕ, ಭಾವನಾತ್ಮಕ ಮತ್ತು ಸರ್ವತೋಮುಖ ವಿಕಾಸಕ್ಕೆ ಮುಖ್ಯ ವಾದದ್ದು. ಈ ಬಗ್ಗೆ M S Murthy ಸರ್ ತುಂಬಾ ವಿಚಾರಗಳನ್ನ ಬರೆದಿದ್ದಾರೆ. ಆ ವಿಚಾರಗಳಿಂದ ನಾನು ಬಹಳಷ್ಟು ಕಲಿತಿದ್ದೇನೆ ಮತ್ತು ಮಕ್ಕಳಿಗೆ ಕಲಿಸಿದ್ದೇನೆ. ಚುಕ್ಕಿಯ ಮೇಲೂ ಪ್ರಯೋಗಮಾಡಿ ಯಶಸ್ಸು ಕಂಡಿದ್ದೇನೆ, ನಮ್ಮ ಶಾಲಾ ಮಕ್ಕಳಿಗೂ ಇದರ ಪ್ರಯೋಜನ ನೀಡಿದ್ದೇನೆ.
ಮೂರ್ತಿ ಸರ್ ರವರ ತಾತ್ವಿಕ ಕಲಾ ವಿಚಾರಗಳೇ ನನ್ನ ಈ ಪ್ರಯೋಗಕ್ಕೆ ಸ್ಫೂರ್ತಿ ಮತ್ತು ದಾರಿ. ಮಕ್ಕಳಿಗೆ ಹೀಗೆ ಒಂದು ಕಾರ್ಡ್ ಶೀಟನ್ನು ಗೋಡೆಯ ಮೇಲೆ ಅಂಟಿಸಿ ಅಲ್ಲಿ ಕೆಲವು ಬಣ್ಣದ ಪೆನ್ಸಿಲ್ ಸ್ಕೆಚ್ ಪೆನ್ ಅಥವಾ ಕ್ರೇಯಾನ್ ಗಳನ್ನ ಅಲ್ಲೇ ಹತ್ತಿರದಲ್ಲಿಡಿ. ಯಾವುದೇ ಕಾರಣಕ್ಕೂ ಮಗುವಿಗೆ ಬರೀ ಎಂದು ಒತ್ತಾಯ ಮಾಡಬೇಡಿ. ಮಗು ತಾನಾಗಿಯೇ ಕುತೂಹಲದಿಂದ ಅಲ್ಲಿಗೆ ಬರುತ್ತದೆ. ಮಗು ಬರೆಯುವಾಗ ಯಾವುದೇ ಕಾರಣಕ್ಕೂ ಗೈಡ್ ಮಾಡಬೇಡಿ. ಅದು ಏನಾದರೂ ಬರೆಯಲಿ, ತನಗೆ ಇಷ್ಟಬಂದದ್ದು. ಈ ಸ್ಕ್ರಿಬಲಿಂಗ್ ನಿಂದ ಮಗುವಿನ ಲೋಕೋಮೋಟಾರ್ ಸ್ಕಿಲ್ ಗಳು ಬೆಳವಣಿಗೆ ಹೊಂದುತ್ತವೆ. ಸಂಪೂರ್ಣ ವ್ಯಕ್ತಿತ್ವಕ್ಕೆ ಕಾಲಾಂತರದಲ್ಲಿ ಬಹಳ ದೊಡ್ಡ ಶಕ್ತಿ ಇದರಿಂದ ಸಿಕ್ಕುತ್ತದೆ.
ಮಗು ಹೀಗೆಯೇ ತನಗಿಷ್ಟ ಬಂದದ್ದನ್ನ ಬರೆಯುತ್ತಲಿರಲಿ. ಪೂರ್ಣ ಕಾರ್ಡ್ ಶೀಟ್ ತುಂಬಿದ ಮೇಲೆ ಅದನ್ನ ನಿಧಾನವಾಗಿ ಜಾಗರೂಕತೆಯಿಂದ ತೆಗೆದು ನಂತರ ಹೊಸದನ್ನು ಅಂಟಿಸಿ. ಅದು ಮುಗಿದ ನಂತರ ಮತ್ತೊಂದು. ಬರೆದವುಗಳನ್ನ ಜೋಪಾನವಾಗಿ ಸಂಗ್ರಹಿಸಿಡಿ. ಆ ಮಗು ಬೆಳೆದ ಮೇಲೆ ಆತ ಹೇಗೆ ಮೊದಲು ಕಲಿಯಲು ಶುರು ಮಾಡಿದ ಎಂಬುದರ ನೆನಪಿನ ಅದ್ಭುತ ಉಡುಗೊರೆ ಯಾಗಿ ಉಳಿಯುತ್ತದೆ ಅದು.
ಈ ಒಂದು ಕಾಗದ ಮತ್ತು ಕೆಲವು ಸ್ಕೆಚ್ ಪೆನ್ ಅಥವಾ ಬಣ್ಣದ ಪೆನ್ಸಿಲ್ ನಿಂದ ಏನೆಲ್ಲ ಬದಲಾವಣೆಯಾಗುತ್ತದೆ ಎಂಬುದನ್ನ ಕಾದು ನೋಡಿ, ನೀವು ಅಚ್ಚರಿಪಡುತ್ತೀರಿ…
ಈ ಪ್ರಯೋಗ ಮಾಡಿ ಒಂದು ಫೋಟೊ ತೆಗೆದು ನಾಲ್ಕು ಸಾಲು ನಿಮ್ಮ ಅನುಭವ ನನಗೆ ಬರೆಯಿರಿ…
– ವೀರಣ್ಣ ಮಡಿವಾಳರ
9972120570