ಬೆಂಗಳೂರು: ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇಂದಿನಿಂದ ಆರಂಭವಾಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ–2025 ಕ್ಕೆ ನಾಗರಿಕರು ಸಹಕರಿಸುವಂತೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ಮನವಿ ಮಾಡಿದ್ದಾರೆ.
ಸಮೀಕ್ಷೆದಾರರಿಗೆ 29-09-2025 ಮತ್ತು 03-10-2025ರಂದು ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ. ಸಮೀಕ್ಷೆ ಸುಗಮವಾಗಿ ನಡೆಯಲು ಒಟ್ಟು 9 ಮಂದಿ ಕೆ.ಎ.ಎಸ್. ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜಿಸಲಾಗಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ 2 ವಲಯಗಳಲ್ಲಿನ ವಿಧಾನಸಭಾ ಕ್ಷೇತ್ರಗಳ 64 ವಾರ್ಡ್‌ಗಳ ಒಟ್ಟು 14.65 ಲಕ್ಷ ಮನೆಗಳು ಈ ಸಮೀಕ್ಷೆಗೆ ಒಳಪಡಲಿವೆ ಎಂದಿದ್ದಾರೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಗೆ ವಿಧಾನಸಭಾ ಕ್ಷೇತ್ರಗಳಾದ ಮಲ್ಲೇಶ್ವರಂ, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್, ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ (ಭಾಗಶಃ), ರಾಜರಾಜೇಶ್ವರಿ ನಗರ, ಯಶವಂತಪುರ ಹಾಗೂ ದಾಸರಹಳ್ಳಿ (ಭಾಗಶಃ) ಸೇರಿವೆ.
ಹಿಂದುಳಿದ ವರ್ಗಗಳ ಆಯೋಗ ಮತ್ತು ಸರ್ಕಾರದ ನಿರ್ದೇಶನದಂತೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ–2025 ನಡೆಸಲು ಎಲ್ಲಾ ಪೂರ್ವ ತಯಾರಿಗಳನ್ನು ಮಾಡಲಾಗಿದೆ. ಸಮೀಕ್ಷೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು/ನೌಕರರನ್ನು ನಿಯೋಜಿಸಲಾಗಿದ್ದು, ಅವರಿಗೆ ಅಗತ್ಯ ತರಬೇತಿ ನೀಡಲಾಗಿದೆ ಎಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ರವರು ತಿಳಿಸಿದರು.
ನಾಗರಿಕರಲ್ಲಿ ವಿನಂತಿ:
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ನಾಗರಿಕರು, ಸಮೀಕ್ಷಾದಾರರು ಮನೆಗೆ ಭೇಟಿ ನೀಡಿದಾಗ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ಸಮೀಕ್ಷೆಯಲ್ಲಿ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.
ಸಮೀಕ್ಷೆಗೆ ಈ ದಾಖಲೆಗಳು ಕಡ್ಡಾಯ
ಆಧಾರ್ ಕಾರ್ಡ್
ಪಡಿತರ ಚೀಟಿ
ಮತದಾರರ ಗುರುತಿನ ಚೀಟಿ, ವಿಕಲಚೇತನರ ಸಂದರ್ಭದಲ್ಲಿ UID ಕಾರ್ಡ್ ಅಥವಾ ಪ್ರಮಾಣಪತ್ರಗಳು. ಪ್ರತಿ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ಗಳು ಮೊಬೈಲ್ಗೆ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ, ಏಕೆಂದರೆ ಸಮೀಕ್ಷೆಯ ಸಮಯದಲ್ಲಿ ಒಟಿಪಿ (OTP) ಗಾಗಿ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ಗೆ ಸಂದೇಶ ಕಳುಹಿಸಲಾಗುತ್ತದೆ.
ಸಮೀಕ್ಷೆಗೆ ಹಾಜರಾಗಲು ಬೇಕಾಗುವ ದಾಖಲೆಗಳು
ಆಧಾರ್ ಕಾರ್ಡ್ : ಪ್ರತಿ ಕುಟುಂಬದ ಸದಸ್ಯರಿಗೆ, ವಿಶೇಷವಾಗಿ 6 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಡ್ಡಾಯವಾಗಿದೆ.
ಪಡಿತರ ಚೀಟಿ : ಆಧಾರ್ ಸಂಖ್ಯೆಯನ್ನು ದೃಢೀಕರಿಸಲು ಪಡಿತರ ಚೀಟಿಯನ್ನು ಆಧಾರವಾಗಿ ಬಳಸಲಾಗುತ್ತದೆ.
ಮತದಾರರ ಗುರುತಿನ ಚೀಟಿ: ಇದು ಗುರುತಿನ ದೃಢೀಕರಣಕ್ಕೆ ಸಹಕಾರಿಯಾಗುತ್ತದೆ.
ವಿಕಲಚೇತನರಿಗಾಗಿ : ವಿಕಲಚೇತನರಾಗಿದ್ದರೆ, ಅವರ UID ಕಾರ್ಡ್ ಅಥವಾ ಸಂಬಂಧಪಟ್ಟ ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
ನೆನಪಿನಲ್ಲಿಡಬೇಕಾದ ಅಂಶಗಳು:
ಆಧಾರ್ ಲಿಂಕಿಂಗ್ : ನಿಮ್ಮ ಆಧಾರ್ಗೆ ಮೊಬೈಲ್ ನಂಬರ್ ಲಿಂಕ್ ಆಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಸಮೀಕ್ಷೆಯ ಸಮಯದಲ್ಲಿ OTP ಸಂದೇಶವನ್ನು ಅದಕ್ಕೆ ಕಳುಹಿಸಲಾಗುತ್ತದೆ.
ಒಟಿಪಿ (OTP ): ಒಬ್ಬ ಸದಸ್ಯ ಮನೆಯಲ್ಲಿ ಇಲ್ಲದಿದ್ದರೆ, ಕುಟುಂಬದ ಪರವಾಗಿ ಉತ್ತರ ನೀಡುವವರು ಫೋನ್ ಮೂಲಕ OTP ಸಂಖ್ಯೆಯನ್ನು ಪಡೆದು ಮಾಹಿತಿ ನೀಡಬೇಕಾಗುತ್ತದೆ.
ಆಧಾರ್ ಇಲ್ಲದಿದ್ದರೆ : ಆಧಾರ್ ಸಂಖ್ಯೆ ಇಲ್ಲದಿದ್ದರೆ, ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಸಂಖ್ಯೆಯನ್ನು ಪಡೆದು ಸಮೀಕ್ಷೆಯಲ್ಲಿ ಭಾಗವಹಿಸಬಹುದು.
ಸಮೀಕ್ಷೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಯಾರೂ ಕೂಡಾ ಸಮೀಕ್ಷೆಯಿಂದ ಹೊರಗುಳಿಯಬಾರದು. ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನು ಕೇಳಲಾಗುವುದು. ಎಲ್ಲರೂ ಪ್ರತಿಯೊಂದು ಪ್ರಶ್ನೆಗಳಿಗೆ ಸಮರ್ಪಕವಾದ ಮಾಹಿತಿಯನ್ನು ಒದಗಿಸಬೇಕು. ಸರಿಯಾದ ಮಾಹಿತಿ ನೀಡಿದರೆ ಮಾತ್ರ ವೈಜ್ಞಾನಿಕ ಸಮೀಕ್ಷೆ ಸಾಧ್ಯವಿದೆ.
ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ ಸಾರ್ವಜನಿಕರು ಸಮೀಕ್ಷೆ ಕುರಿತು ಯಾವುದೇ ದೂರು ಅಥವಾ ಮಾಹಿತಿಯನ್ನು ಪಡೆಯಬಹುದು. ಆನ್ ಲೈನ್ ಮೂಲಕ ಸಹ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಸಮೀಕ್ಷೆ ಆರಂಭವಾಗುವ ಪೂರ್ವದಲ್ಲೇ ಆಶಾ ಕಾರ್ಯಕರ್ತರು ಎಲ್ಲರ ಮನೆಗಳಿಗೆ ಹೋಗಿ ಸಮೀಕ್ಷೆಯ ನಮೂನೆಯನ್ನು ಒದಗಿಸಲಿದ್ದಾರೆ. ಇದರಿಂದ ಸರಿಯಾದ ಮಾಹಿತಿಯನ್ನು ಒದಗಿಸುವ ಬಗ್ಗೆ ಜಾಗೃತಿ ಮೂಡಲು ಸಾಧ್ಯವಿದೆ. ಪ್ರತಿ ಶಿಕ್ಷಕರಿಗೆ 120ರಿಂದ 150ಮನೆಗಳ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ.








