ಮಂಡ್ಯ : ರಾಜ್ಯ ಸರ್ಕಾರದಿಂದ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಲು ಬರುವ ಅಧಿಕಾರಿಗಳಿಗೆ ನಾವು ಮಾಹಿತಿ ನೀಡಲ್ಲ ಎಂದು ಬಿಜೆಪಿ ನಾಯಕರ ಹೇಳಿಕೆಗೆ ಮದ್ದೂರು ಶಾಸಕ ಕೆ.ಎಂ.ಉದಯ್ ಆಕ್ರೋಶ ವ್ಯಕ್ತಪಡಿಸಿದರು.
ಮದ್ದೂರು ವಿಧಾನಸಭಾ ಕ್ಷೇತ್ರದ ಮರಕಾಡದೊಡ್ಡಿ, ಗೊರವನಹಳ್ಳಿ ಹಾಗೂ ಉಪ್ಪಾರದೊಡ್ಡಿ ಗ್ರಾಮಗಳಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಜಾತಿ ಗಣತಿ ವಿಚಾರವಾಗಿ ನಮ್ಮ ಮನೆ ಬಳಿ ಬರುವ ಅಧಿಕಾರಿಗಳಿಗೆ ನಾವು ಮಾಹಿತಿ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಂಸದ ತೇಜಸ್ವಿ ಸೂರ್ಯ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ವಿವಿಧ ನಾಯಕರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕ ಉದಯ್ ಬಿಜೆಪಿ ನಾಯಕರ ಹೇಳಿಕೆಗಳು ಅವರ ಉದ್ಧಟತನವನ್ನು ತೋರಿಸುತ್ತಿದೆ ಎಂದು ಕಿಡಿಕಾರಿದರು.
ಇನ್ನು ಕೆಲ ದಿನಗಳಲ್ಲೇ ಕೇಂದ್ರ ಸರ್ಕಾರವು ಸಹ ಜಾತಿ ಸಮೀಕ್ಷೆಗೆ ಮುಂದಾಗಿದೆ. ಆಗಲು ಸಹ ಬಿಜೆಪಿ ನಾಯಕರು ಮಾಹಿತಿ ನೀಡಲ್ಲಾ ಅಂತ ಹೇಳಲು ಅವರಿಗೆ ತಾಕತ್ ಇದ್ದಿಯಾ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ಏನು ಮಾಡಿದರೂ ಅವರಿಗೆ ಸರಿಯಾಗಿರುತ್ತೆ. ಅದೇ ರಾಜ್ಯ ಸರ್ಕಾರ ಮಾಡಿದರೇ ವಿರೋಧ ಮಾಡೋದೇ ಅವರ ಕೆಲಸವಾಗಿದೆ ಎಂದು ಗುಡುಗಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗುವ ಕಾಲ ಸನಿಹದಲ್ಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಉದಯ್ ಅವರು, ಆರೋಪ ಮಾಡೋದೆ ವಿಪಕ್ಷ ನಾಯಕರ ಕೆಲಸವಾಗಿದೆ. ಆರೋಪಗಳೆಲ್ಲವು ಸತ್ಯವಾಗುತ್ತ. ಕುಮಾರಸ್ವಾಮಿ ಅವರು ಹೇಳಿರುವ ಮಾತುಗಳು ಎಷ್ಟು ಸತ್ಯವಾಗಿವೆ. ಅವರು ಹೇಳಿರುವ ಹಾಗೆ ನಡೆದುಕೊಂಡಿದ್ದಾರಾ? ಮಂಡ್ಯ ಜನತೆ ನನ್ನ ಗೆಲ್ಲಿಸಿದರೆ ಮೇಕೆದಾಟು ಯೋಜನೆಗೆ ಮೋದಿಯವರಿಂದ ಐದು ನಿಮಿಷದಲ್ಲಿಯೇ ಅನುಮತಿ ಕೊಡಿಸುವೆ ಎಂದು ಹೇಳಿದ್ರು. ಎರಡು ವರ್ಷ ಆಗ್ತಾ ಇದೆ ಅದರ ಬಗ್ಗೆ ಉಸಿರೇ ಬಿಡ್ತಿಲ್ಲ ಅವರೆಲ್ಲ ಗಾಳಿಯಲ್ಲಿ ಗುಂಡು ಹೊಡೆಯೋದು ಅಷ್ಟೇ ಅವರ ಹೇಳಿಕೆಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಟಾಂಗ್ ನೀಡಿದರು.
ಇನ್ನು ಕೆ.ಆರ್.ಎಸ್ ಬೃಂದಾವನದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ. ಈ ಯೋಜನೆಯು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕನಸಿನ ಕೂಸಾಗಿದೆ. ಸಾಂಸ್ಕೃತಿಕ ನಗರ ಮೈಸೂರಿಗೆ ಬರುವ ಪ್ರವಾಸಿಗರಿಗೆ ಮತ್ತೋಂದು ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ. ಬೇರೆ ಕಡೆ ಈ ಕಾರ್ಯಕ್ರಮ ಆಯೋಜಿಸಿದರೇ ಅಷ್ಟು ಯಶಸ್ವಿಯಾಗಲ್ಲ. ಹೀಗಾಗಿ ಬೃಂದಾವನದಲ್ಲಿ ನಡೆಸಿದರೆ ಕೆ.ಆರ್.ಎಸ್ ಗೆ ಬರುವವರಿಗೆ ಅನುಕೂಲವಾಗುತ್ತದೆ. ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರಕುತ್ತದೆ ಎಂಬ ದೃಷ್ಟಿಯಿಂದ ಕಾವೇರಿ ಆರತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಧುಕುಮಾರ್, ಎನ್.ಡಿ.ಶಿವಚರಣ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಪಿ.ರಾಘವಾ, ತಾ.ಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆದೀಶ್, ಕಾಂಗ್ರೆಸ್ ಮುಖಂಡ ಹೊಂಬಯ್ಯ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
BREAKING: ಅ.2ರಂದು ಬೆಂಗಳೂರಿನ ಈ ಏರಿಯಾದಲ್ಲಿ ‘ಮದ್ಯ ಮಾರಾಟ’ ನಿಷೇಧಿಸಿ ನಗರ ಪೊಲೀಸ್ ಆಯುಕ್ತರ ಆದೇಶ