ಬೆಂಗಳೂರು : ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಉದ್ಯೋಗ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಇದೀಗ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಪೊಲೀಸ್ ಇಲಾಖೆಯ ನೇಮಕಾತಿಗೆ ಶಾಶ್ವತ ವಯೋಮಿತಿ ಸಡಿಲಿಕೆಗೆ ಮುಂದಾಗಿದ್ದು, ಸದ್ಯದಲ್ಲೇ ವಯೋಮಿತಿ ಸಡಿಲಿಕೆ ಪ್ರಕಟಿಸುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನ ಸದಾಶಿವ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿ. ಪರಮೇಶ್ವರ್,ಒಂದು ಸಲಕ್ಕೆ ಅನ್ವಯ ಆಗುವಂತೆ ಸಡಿಲಿಕೆ ಮಾಡಲಾಗಿದೆ. 2027ರವರೆಗೆ ವಯೋಮಿತಿ ಸಡಿಲಿಸಿದ್ದೇವೆ. ನಮ್ಮ ಪೊಲೀಸ್ ಇಲಾಖೆಯಲ್ಲಿ ಶಾಶ್ವತ ವಯೋಮಿತಿ ಸಡಿಲಿಕೆಗೆ ಮುಂದಾಗಿದ್ದೇವೆ. ಕಾನ್‌ಸ್ಟೇಬಲ್, ಪಿಎಸ್‌ಐ, ಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆ ಬಗ್ಗೆ ಪರಿಶೀಲನೆ ನಡೆದಿದೆ ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ವಯೋಮಿತಿ ಇದೆ ಎಂಬ ಮಾಹಿತಿ ತರಿಸಿಕೊಂಡಿದ್ದೇವೆ. ಸದ್ಯದಲ್ಲೇ ವಯೋಮಿತಿ ಸಡಿಲಿಕೆ ಆದೇಶ ಪ್ರಕಟಿಸುತ್ತೇವೆ ಎಂದರು.
ಇನ್ನು ಸಂಪುಟ ಪುನಾರಚನೆ ಬಗ್ಗೆ ಸಚಿವ ಜಮೀರ್ ಹೇಳಿಕೆಗೆ, ಅದು ಸಿಎಂ ಅವರ ವಿವೇಚನೆಗೆ ಬಿಟ್ಟಿದ್ದು. ಇದೆಲ್ಲವೂ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಮಗೆ ಗೊತ್ತು ಸಹ ಆಗುವುದಿಲ್ಲ. ಕೆಲವರು ಅವರ ಅಭಿಪ್ರಾಯ ಹೇಳಿರಬಹುದು. ಎರಡೂವರೆ ವರ್ಷಕ್ಕೆ ಸಂಪುಟ ಪುನಾರಚನೆ ಅಂತ ಆ ರೀತಿ ಹೇಳಿಕೊಂಡೇ ಬರಲಾಗ್ತಿದೆ. ಇದರ ಬಗ್ಗೆ ನಮಗ್ಯಾರಿಗೂ ಗೊತ್ತಿಲ್ಲ. ಇದರ ಬಗ್ಗೆ ಹೈಕಮಾಂಡ್ ಕೂಡ ಹೇಳಿಲ್ಲ. ಸಿಎಂ, ಕೆಪಿಸಿಸಿ ಅಧ್ಯಕ್ಷರೂ ಹೇಳಿಲ್ಲ. ಒಳಗೆ ಏನು ಅಂಡರ್ಸ್ಟ್ಯಾಂಡಿಂಗ್ ಆಗಿದೆ ಗೊತ್ತಿಲ್ಲ ಎಂದರು.
ಧರ್ಮಸ್ಥಳ ತಲೆಬುರಡೆ ಪ್ರಕರಣದ ತನಿಖೆ ವಿಳಂಬ, ಷಡ್ಯಂತ್ರ ಮಾಡಿದವರನ್ನು ಬಂಧಿಸದ ವಿಚಾರವಾಗಿ, ಅವರ ಬಂಧನಕ್ಕೆ ಕಾನೂನು ತೊಡಕುಗಳಿವೆ. ಅವುಗಳ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಎಫ್ಎಸ್ಎಲ್ ವರದಿ ಇನ್ನೂ ಬಂದಿಲ್ಲ. ಎಸ್ಐಟಿಯವರು ಅವರ ಕೆಲಸ ಮಾಡ್ತಿದ್ದಾರೆ. ಇತ್ತೀಚಿನ ಸಾಕ್ಷ್ಯಗಳನ್ನು ಎಫ್ಎಸ್ಎಲ್ಗೆ ಕಳಿಸಲಾಗಿದೆ. ಎಲ್ಲವನ್ನೂ ಅಂತಿಮಗೊಳಿಸಬೇಕು. ಆಮೇಲೆ ಎಸ್ಐಟಿ ವರದಿ ನೀಡಲಿದೆ. ತನಿಖೆ ಬೇಗ ಮುಗಿಸುವಂತೆ ಸೂಚಿಸಿದ್ದೇವೆ ಎಂದರು.