ದಾವಣಗೆರೆ : ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಜಿಲ್ಲಾಧಿಕಾರಿಗೆ ವಂಚಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮೂರ್ತಿ ಅಲಿಯಾಸ್ ಅಭಿಷೇಕ್ ದೊಡ್ಡಮನಿ (20) ಬಂಧಿತ ಆರೋಪಿ. ತಾನು ಸಚಿವ ಬೈರತಿ ಸುರೇಶ್ ಆಪ್ತ ಸಹಾಯಕ ಎಂದು ಡಿಸಿಗೆ ಕರೆ ಮಾಡಿದ್ದ ಅಭಿಷೇಕ್ ದೊಡ್ಡಮನಿ, ಸರ್ಕಾರಿ ಸೌಲಭ್ಯ ದುರುಪಯೋಗ ಪಡಿಸಿಕೊಂಡ ಹಿನ್ನೆಲೆ ಬಂಧಿಸಲಾಗಿದೆ. ಬಂಧಿತ ಆರೋಪಿ ಕಾರವಾರದವನಾಗಿದ್ದು, ದಾವಣಗೆರೆಗೆ ಆಗಮಿಸಿ ಈ ಕೃತ್ಯ ಎಸಗಿದ್ದ.
ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರ್ ಸ್ವಾಮಿ ಅವರಿಗೆ ಕರೆ ಮಾಡಿದ್ದ ಅಭಿಷೇಕ್ ದೊಡ್ಡಮನಿ, ನಾನು ಬೈರತಿ ಸುರೇಶ್ ಅವರ ಆಪ್ತ ಸಹಾಯಕನಾಗಿದ್ದು ಬೆಳಗಾವಿಗೆ ತೆರಳಬೇಕಾಗಿದೆ, ತನಗೆ ಒಂದು ಕಾರಿನ ವ್ಯವಸ್ಥೆ ಮಾಡಿಕೊಡುವಂತೆ ತಿಳಿಸಿದ್ದಾನೆ. ಆದರೆ ಜಿಲ್ಲಾಧಿಕಾರಿ ಹಿಂದೆ ಮುಂದೆ ಯೋಚಿಸದೆ ಆರೋಪಿ ಅಭಿಷೇಕ್ ದೊಡ್ಡಮನಿಗೆ ಸರ್ಕಾರಿ ಕಾರು, ಅದಕ್ಕೆ ಇಂಧನ ತುಂಬಿಸಿ ಕಾರು ಚಾಲಕನನ್ನು ಕಳುಹಿಸಿಕೊಟ್ಟಿದ್ದರು.
ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಂಡ ಬಗ್ಗೆ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಗುನ್ನೆ ನಂ.86/25 ರಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸರ್ಕಾರಿ ಅಧಿಕಾರಿ ಮತ್ತು ಆಪ್ತ ಸಹಾಯಕನ ಸೋಗಿನಲ್ಲಿ ಜಿಲ್ಲಾಧಿಕಾರಿಗೆ ವಂಚಿಸಿದ್ದ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.