ಬೆಂಗಳೂರು: ಜಾತಿ ಸಂಘರ್ಷದ ಕಿಚ್ಚುಹಚ್ಚಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ರೈಸ್ತ ಸಮುದಾಯ ಆಕ್ರೋಶ ಹೊರಹಾಕಿದೆ. ಕ್ರಿಶ್ಚಿಯನ್ ಧರ್ಮದಲ್ಲಿ ಜಾತಿ ವ್ಯವಸ್ಥೆ ಸೃಷ್ಠಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸರಿಯಲ್ಲ, ಈ ಸಂಬಂಧದ ನಿರ್ಧಾರವನ್ನು ಕೈಬಿಡಬೇಕೆಂದು ಕ್ರಿಶ್ಚಿಯನ್ ಸೇವಾ ಸಂಘ (CSS) ಒತ್ತಾಯಿಸಿದೆ.
ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರತಿಪಾದಿಸುತ್ತಿರುವ ಕ್ರೈಸ್ತಧರ್ಮದ ಹಾಗೂ ಜನರ ಹಿತಾಸಕ್ತಿ ಸಂಬಂಧ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿರುವ ಕ್ರಿಶ್ಚಿಯನ್ ಸೇವಾ ಸಂಘದ ಅಧ್ಯಕ್ಷ ಶಾಜಿ ಟಿ ವರ್ಗೀಸ್ ಅವರು, ರಾಜ್ಯ ಸರ್ಕಾರದ ನಡೆ ವಿರೋಧಿಸಿ ಸಿಎಂ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಮುಖ್ಯ ಕಾರ್ಯದರ್ಶಿ, ರಾಜ್ಯ ಹಿಂದುಳಿದ ವರ್ಗಗಳ ಆಯುಕ್ತರಿಗೆ ಪತ್ರ ಬರೆ ಬೆಳವಣಿಗೆ ಗಮನಸೆಳೆದಿದೆ.
ಸಂವಿಧಾನದ ಆಶಯಗಳನ್ನು ಗೌರವಿಸುವ ಬಗ್ಗೆ ಭರವಸೆ ನೀಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಈ ರಾಜ್ಯವನ್ನು ‘ಸರ್ವ ಜನಾಂಗಗಳ ಶಾಂತಿಯ ತೋಟ’ವನ್ನಾಗಿ ಮಾಡುವ ಭರವಸೆಯನ್ನು ನೀಡಿತ್ತು. ಆದರೆ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದೀಗ ಕರ್ನಾಟಕವನ್ನು ಸರ್ವ ಜನಾಂಗಗಗಳ ನಡುವೆ ಸಂಘರ್ಷ ತಂದೊಡ್ಡಲು ಪ್ರಯತ್ನಿಸಿರುವುದು ವಿಷಾದನೀಯ ಎಂದು ವಕೀಲರೂ ಆದ ಶಾಜಿ ಟಿ ವರ್ಗೀಸ್ ಈ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿವಿಧ ಕ್ರಿಶ್ಚಿಯನ್ ಜಾತಿಗಳನ್ನು ನಮೂದಿಸಿ, ಕ್ರೈಸ್ತ ಧರ್ಮದಲ್ಲೂ ಜಾತಿ-ವ್ಯವಸ್ಥೆ ಸೃಷ್ಟಿಸಿರುವುದು ನ್ಯಾಯಸಮ್ಮತವಲ್ಲ ಎಂದು ಪ್ರತಿಪಾದಿಸಿರುವ ಶಾಜಿ ವರ್ಗೀಸ್, ಕ್ರೈಸ್ತ ಧರ್ಮದಲ್ಲಿ ನಿರ್ದಿಷ್ಟ ಪಂಗಡದ ಸಂಪ್ರದಾಯವನ್ನು ಅನುಸರಿಸಲಾಗುತ್ತದೆಯೇ ಹೊರತು, ಜಾತಿಯ ಆಧಾರದಲ್ಲಿ ಗುರುತಿಸಲಾಗುತ್ತಿಲ್ಲ. ಜಾತಿ ವ್ಯವಸ್ಥೆಯು ಕ್ರೈಸ್ತ ಧರ್ಮದಲ್ಲಿ ಇಲ್ಲ. ಹೀಗಿರುವಾಗ ಕರ್ನಾಟಕ ರಾಜ್ಯ ಸರ್ಕಾರವು ಕ್ರೈಸ್ತ ಧರ್ಮವನ್ನು ಒಡೆಯುವ ಸಂಚಿನ ಪ್ರಯತ್ನವಾಗಿ ಕ್ರೈಸ್ತ ಧರ್ಮದಳೊಗೆ ವಿವಿಧ ಜಾತಿಗಳನ್ನು ಸೃಷ್ಟಿಸಿದೆ. ಇದು ಧರ್ಮ ವಿರೋಧಿ ನಡೆಯಾಗಿದ್ದು, ಕೂಡಲೇ ಈ ಜಾತಿ-ಪದ್ದತಿಗೆ ತಿಲಾಂಜಲಿ ಹಾಕಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.
ಈ ಹಿಂದೆ ಇದ್ದಂತಹಾ ವ್ಯವಸ್ಥೆಯಲ್ಲಿ ಕ್ರೈಸ್ತ ಧರ್ಮೀಯರಿಗೆ ಸ್ಥಾನಮಾನ, ಸವಲತ್ತು ಸಿಗುವಂತಾಗಲು ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕ್ರಿಶ್ಚಿಯನ್ ಸೇವಾ ಸಂಘ ಒತ್ತಾಯಿಸುತ್ತಿದೆ ಎಂದವರು ತಿಳಿಸಿದ್ದಾರೆ.