ಮಂಡ್ಯ :- ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ರೈತಾಪಿ ವರ್ಗದ ಅನುಕೂಲತೆಗಾಗಿ ಹಲವು ವರ್ಷಗಳಿಂದ ಸೋಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರ ನೀಡಿದರೇ ಇನ್ನಷ್ಟು ಲಾಭದಾಯಕ ಸಂಘವಾಗಿ ಮುಂದುವರೆಸಲು ಸಾಧ್ಯವಾಗಲಿದೆ ಎಂದು ಸಂಘದ ಅಧ್ಯಕ್ಷ ಸಿ.ಟಿ.ಶಂಕರ್ ಹೇಳಿದರು.
ಮದ್ದೂರು ತಾಲೂಕಿನ ಸೋಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 6.50 ಲಕ್ಷ ರೂ ಲಾಭಗಳಿಸಿದ್ದು, ಸಂಘದಲ್ಲಿ 1362 ಮಂದಿ ಸದಸ್ಯರಿದ್ದಾರೆ. ಸಂಘದ ವತಿಯಿಂದ ವಾರ್ಷಿಕ 7.53 ಕೋಟಿ ವಹಿವಾಟು ನಡೆಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಂಘದಿಂದ ಕಿಸಾನ್ ಕಾರ್ಡ್ ಸಾಲ 3.55 ಕೋಟಿ. ಮಧ್ಯಮಾವಧಿ ಸಾಲ 27 ಲಕ್ಷ, ಸ್ವಸಹಾಯ ಗುಂಪಿನ ಸಾಲ ರೂ.18 ಲಕ್ಷ ಹಾಗೂ ಗೊಬ್ಬರ ಮಾರಾಟದಿಂದ 18.50 ಲಕ್ಷ ವಹಿವಾಟು ಆಗಿದೆ ಎಂದರು. ಸಂಘದ ಕಟ್ಟಡವು ಹಳೆಯ ಕಟ್ಟಡವಾಗಿದ್ದು, ನೂತನ ಕಟ್ಟಡ ಕಾಮಗಾರಿ ಪ್ರಾರಂಭವಾಗಿದೆ. ಮುಂದಿನ ವಾರ್ಷಿಕ ಸಭೆಯ ವೇಳೆಗೆ ಉದ್ಘಾಟನೆಯಾಗಲಿದ್ದು, ಕಟ್ಟಡದಲ್ಲಿ ಸಭಾಂಗಣ, ಕಛೇರಿ ಹಾಗೂ ವಾಣಿಜ್ಯ ಮಳಿಗೆಗಳು ಸೇರಿದಂತೆ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಲಿದೆ. ಈಗಾಗಲೇ ಕಟ್ಟಡ ಅಭಿವೃದ್ಧಿಗಾಗಿ ಕ್ಷೇತ್ರದ ಶಾಸಕರಾದ ಕೆ.ಎಂ.ಉದಯ್ ಅವರು 10 ಲಕ್ಷ ರೂ ಅನುದಾನವನ್ನು ನೀಡಿದ್ದಾರೆ ಎಂದು ಸಭೆಯಲ್ಲಿ ಕೃತಜ್ಞತೆ ಸಲ್ಲಿಸಿದರು.
ಇನ್ನು ಇದೇ ವೇಳೆ ಸಹಕಾರ ಸಂಘದಿಂದ ವಾಟ್ಸಪ್ ಗ್ರೂಪ್ ತೆರೆದು ಷೇರುದಾರರಿಗೆ ಸಕಾಲದಲ್ಲಿ ದೊರೆಯುವ ಸಾಲ, ಗೊಬ್ಬರ, ಸಭಾ ಸೂಚನಾ ಪತ್ರ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಗ್ರೂಪ್ ತೆರೆಯುವಂತೆ ಅಧ್ಯಕ್ಷ ಶಂಕರ್ ಸೂಚನೆ ನೀಡಿದರು. ಸಭೆಯಲ್ಲಿ ಸಂಘದ ಕೆಲವು ಲೋಪದೋಷಗಳನ್ನು ನೆರೆದಿದ್ದ ಸದಸ್ಯರುಗಳು ಪ್ರಸ್ತಾಪಿಸಿದಾಗ ಸ್ವಲ್ಪ ಗೊಂದಲ ಉಂಟಾದರೂ ಸಂಘದ ಅಧ್ಯಕ್ಷರಾದ ಸಿ.ಟಿ.ಶಂಕರ್ ಸಮರ್ಪಕವಾದ ಉತ್ತರವನ್ನು ನೀಡಿ ಸಮಸ್ಯೆಯನ್ನು ತಿಳಿಗೊಳಿಸಿದರು. ಇದೇ ವೇಳೆ ಉಪಾಧ್ಯಕ್ಷ ಬಸವರಾಜು, ನಿರ್ದೇಶಕರಾದ ಮಹದೇವು, ಬೋರೆಗೌಡ, ಶಿವಣ್ಣ, ಜಯಲಕ್ಷ್ಮಮ್ಮ, ಗಂಟಯ್ಯ, ರಘುನಂದನ್, ಮಲ್ಲಿಕಾ, ಕೆ.ಟಿ.ಪ್ರಕಾಶ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾಮಣಿ, ಸಿಬ್ಬಂದಿ ಕೃಷ್ಣ ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ