ರಾಮನಗರ : ನಗರದ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ವತಿಯಿಂದ ಆಯೋಜಿಸಲಾಗಿದ್ದ ನಗರ ಬಸ್ ಸಂಚಾರ ಪ್ರಾರಂಭೋತ್ಸವಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಾಮನಗರ ಬಸ್ ನಿಲ್ದಾಣಕ್ಕೆ ಅಗತ್ಯ ಜಮೀನು ಒದಗಿಸಿದ್ದಲ್ಲಿ ಹೊಸ ಬಸ್ ನಿಲ್ದಾಣವನ್ನು ನಿರ್ಮಿಸಿಕೊಡಲಾಗುವುದು. ಈಗಿರುವ ಬಸ್ ನಿಲ್ದಾಣವನ್ನು ಶೀಘ್ರದಲ್ಲಿಯೇ ನವೀಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ರಾಮನಗರದಲ್ಲಿ ನಗರ ಬಸ್ ಸಂಚಾರ ಆರಂಭಗೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು.ಬೆಂಗಳೂರಿನ ಸುತ್ತಮುತ್ತ ಇರುವ ಜಿಲ್ಲೆಗಳಿಗೆ ಬೆಂಗಳೂರು ನಗರ ಸಾರಿಗೆ (ಬಿಎಂಟಿಸಿ) ಬಸ್‌ಗಳನ್ನು ಸಂಚಾರಕ್ಕೆ ಕ್ರಮ ವಹಿಸಲಾಗಿದೆ. ಅಂತೆಯೇ ರಾಮನಗರಕ್ಕೂ ಸಹ ಪ್ರಸ್ತುತ ಸುಗ್ಗನಹಳ್ಳಿಯವರೆಗೆ ಬೆಂಗಳೂರು ನಗರ ಬಸ್ ಸಾರಿಗೆ ಸಂಚರಿಸಲಾಗುತ್ತಿದ್ದು, ಅದನ್ನು ರಾಮನಗರಕ್ಕೆ ವಿಸ್ತರಣೆ ಮಾಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸಾರಿಗೆ ಸಂಸ್ಥೆಗೆ ಹೊಸದಾಗಿ 5,800 ಬಸ್‌ಗಳನ್ನು ಖರೀದಿಸಲಾಗಿದೆ ಹಾಗೂ ಚಾಲಕರು, ನಿರ್ವಾಹಕರು, ಮೆಕಾನಿಕ್‌ಗಳು ಸೇರಿದಂತೆ 10,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ಹೆಚ್ಚು ಬಸ್ಗಳು ಸಂಚಾರ ಆರಂಭಿಸಲು ಅನುಕೂಲಕರವಾಗಲಿದೆ. ಶಕ್ತಿ ಯೋಜನೆಯಿಂದ ಪ್ರತಿದಿನ 60 ರಿಂದ 65 ಲಕ್ಷ ಜನ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಶೇ. 23 ರಷ್ಟು ಉದ್ಯೋಗ ಸೃಷ್ಠಿಯಾಗಿದೆ ಎಂದರು.