ಬೆಂಗಳೂರು: ರಾಜ್ಯ ಸರ್ಕಾರದಿಂದ ಬಹುಮಹಡಿ ಕಟ್ಟಡಗಳಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನೀಡಲಾಗುವ ನಿರಾಕ್ಷೇಪಣಾ ಪತ್ರದ ಕುರಿತಂತೆ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ.
ಈ ಕುರಿತಂತೆ ಒಳಾಡಳಿತ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ದಿನಾಂಕ:27-07-2023ರ ಆದೇಶದಲ್ಲಿ ಕರ್ನಾಟಕ ಅಗ್ನಿಶಾಮಕ ದಳ ಅಧಿನಿಯಮ, 1964ರ ಕಲಂ 13 ಕ್ಕೆ ತಿದ್ದುಪಡಿ ತಂದು “ಎತ್ತರದ ಕಟ್ಟಡವನ್ನು ನಿರ್ಮಾಣ ಮಾಡಲು ಉದ್ದೇಶಿಸುವ ಯಾವುದೇ ವ್ಯಕ್ತಿಯು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯತಕ್ಕದ್ದು” ಮತ್ತು “ಎತ್ತರದ ಕಟ್ಟಡ”[High Rise Building] ಎಂದರೆ “ರಾಷ್ಟ್ರೀಯ ಕಟ್ಟಡ ಸಂಹಿತೆ, 2016 ರಲ್ಲಿ ಪರಿಭಾಷಿಸಿದಂತೆ ಅದರ ಅಧಿಭೋಗದಾರಿಕೆಯನ್ನು ಲೆಕ್ಕಿಸದೆ 21.00 ಮೀಟರುಗಳ ಅಥವಾ ಅದಕ್ಕಿಂತ ಹೆಚ್ಚಿನ ಎತ್ತರದ ಕಟ್ಟಡ” ಎಂದು ವ್ಯಾಖ್ಯಾನಿಸಿ, ಬಹುಮಹಡಿ ಕಟ್ಟಡಗಳ ಎತ್ತರವನ್ನು 15.00 ಮೀಟರ್‌ನಿಂದ “21.00 ಮೀಟರುಗಳು ಅಥವಾ ಅದಕ್ಕಿಂತ ಹೆಚ್ಚಿನ ಎತ್ತರದ ಕಟ್ಟಡ” ಎಂದು ವಿವರಿಸಿ ಅಧಿಸೂಚಿಸಲಾಗಿದೆ.
ಅದರಂತೆ ವಸತಿ / ಶೈಕ್ಷಣಿಕ / ವಾಣಿಜ್ಯ / ಕೈಗಾರಿಕಾ / ಆಸ್ಪತ್ರೆ ಮತ್ತು ಗೋದಾಮಿನ ಉಪಯೋಗಕ್ಕಾಗಿ ನಿರ್ಮಾಣ ಮಾಡುವ ಬಹುಮಹಡಿ [High Rise Building] ಕಟ್ಟಡಗಳಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನೀಡಲಾಗುವ ನಿರಾಕ್ಷೇಪಣಾ ಪತ್ರವನ್ನು ವಿತರಿಸುವ ಅಧಿಕಾರವನ್ನು ಪ್ರತ್ಯಾಯೋಜಿಸಲು ಸರ್ಕಾರವು ಉದ್ದೇಶಿಸಿ, ಕೆಳಕಂಡಂತೆ ಆದೇಶಿಸಿದೆ.
ಈ ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿನ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯು ತಮ್ಮ ವ್ಯಾಪ್ತಿಯಲ್ಲಿರುವ ಬಹುಮಹಡಿ ಕಟ್ಟಡವಲ್ಲದ (low rise building), ಅಂದರೆ, 21.00 ಮೀಟರ್‌ಗಿಂತ ಕಡಿಮೆ ಎತ್ತರದ ವಸತಿ/ಶೈಕ್ಷಣಿಕ/ವಾಣಿಜ್ಯ/ಕೈಗಾರಿಕಾ/ಆಸ್ಪತ್ರೆ ಮತ್ತು ಗೋದಾಮು ಕಟ್ಟಡಗಳಿಗೆ (15.00 ಮೀಟರ್‌ಗಿಂತ ಕಡಿಮೆ ಎತ್ತರದ ಶೈಕ್ಷಣಿಕ ಕಟ್ಟಡಗಳನ್ನು ಹೊರತುಪಡಿಸಿ) ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸಲಹಾ/ಸಮಾಪನ ಪತ್ರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯು ನಿರೀಕ್ಷಣೆ (inspection) ನಡೆಸಿ ವರದಿಯನ್ನು ನಿಗದಿತ ನಮೂನೆಯಲ್ಲಿ ಸಂಬಂಧಪಟ್ಟ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗೆ ಸಲ್ಲಿಸುವ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದೆ.
ಮುಂದುವರೆದು, ಸಂಬಂಧಪಟ್ಟ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಯು ತಮಗೆ ಸಲ್ಲಿಸಲಾದ ನಿರೀಕ್ಷಣಾ ವರದಿ[Inspection Report]ಯನ್ನು ಪರಿಶೀಲಿಸಿ, ಸಂಬಂಧಪಟ್ಟ ಕಟ್ಟಡದ ಮಾಲೀಕರಿಂದ ನಿಗದಿತ ಶುಲ್ಕವನ್ನು ಸರ್ಕಾರಕ್ಕೆ ಭರಿಸಿಕೊಂಡು ಸಲಹಾ/ಸಮಾಪನ ಪತ್ರವನ್ನು ವಿತರಿಸುವ ಅಧಿಕಾರವನ್ನು ಪ್ರತ್ಯಾಯೋಜಿಸಿ ಆದೇಶಿಸಲಾಗಿದೆ.
CRIME NEWS: ಮೈಸೂರಲ್ಲಿ ಅರಣ್ಯ ಇಲಾಖೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಪತ್ನಿ ನಾಟಕ
300 ವರ್ಷಗಳ ನಂತರ ಮಾನವ ದೇಹದಲ್ಲಿ ಕ್ಯಾನ್ಸರ್ ಚಿಕಿತ್ಸೆಯನ್ನು ಬದಲಾಯಿಸಬಲ್ಲ ಹೊಸ ಅಂಗ ಪತ್ತೆ