ಬೆಂಗಳೂರು: ಕಾಡಗೋಡಿ ದಿಣ್ಣೂರಿನಲ್ಲಿ ದಲಿತರ ಮೇಲೆ ಗೂಂಡಾವರ್ತನೆ ನಡೆದಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಮುಖ್ಯ ಕಾರ್ಯದರ್ಶಿಯವರಿಗೆ ದೂರು ನೀಡಿದ ನಂತರ ಮಾಧ್ಯಮದವರೊಂದಿಗೆ ಇಂದು ಮಾತನಾಡಿದ ಅವರು, ಡಿಐಜಿಗೂ ಮನವಿ ನೀಡುತ್ತಿರುವುದಾಗಿ ತಿಳಿಸಿದರು. ಪರಿಶಿಷ್ಟ ಜಾತಿ, ವರ್ಗಗಳ ವಿಜಿಲೆನ್ಸ್ ಸಮಿತಿ ಸಭೆಯಲ್ಲಿ ದಿಣ್ಣೂರು ಗ್ರಾಮದ ದಲಿತರ ಜಮೀನುಗಳನ್ನು ಅರಣ್ಯಾಧಿಕಾರಿಗಳು ಅಕ್ರಮವಾಗಿ, ಮನೆಗಳನ್ನು ಒಡೆದುಹಾಕಿ ಜಮೀನು ಕಬ್ಜಾ ಮಾಡಿದ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೆ. ಇದು ಕೋರ್ಟ್ ಆದೇಶ ಇರುವುದೇ ಬೇರೆ ಎಂದು ಆಕ್ಷೇಪಿಸಿದರು.
711 ಎಕರೆ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂದು ಅವರು ಹೇಳಿಕೊಂಡಿದ್ದಾರೆ. 250-300 ಎಕರೆ ಕೆಐಡಿಬಿ ವಶದಲ್ಲಿದೆ. ಈಗಾಗಲೇ ಕಾರ್ಖಾನೆಗಳನ್ನು ನಿರ್ಮಿಸಿದ್ದಾರೆ. 250 ಎಕರೆ ರೈಲ್ವೆಗೆ ಸೇರಿದೆ. ಕೆಲವರು ಖಾಸಗಿಯಾಗಿ ಜಾಗ ಪಡೆದು ಕಾರ್ಖಾನೆಗಳನ್ನು ನಿರ್ಮಿಸಿದ್ದಾರೆ. ಅಲ್ಲಿ ಅಪಾರ್ಟ್‍ಮೆಂಟ್‍ಗಳೂ ಬಂದಿವೆ ಎಂದು ವಿವರಿಸಿದರು.
ಮೆಟ್ರೋಗೆ 45 ಎಕರೆ ಕೊಟ್ಟಿದೆ. ಉಳಿದಿರುವುದು ಕೇವಲ 120 ಎಕರೆ. ಇದು ಪಕ್ಕಾ ಆ ಊರಿನ ದಲಿತರ ಜಮೀನುಗಳು. ಅಲ್ಲಿ ದಿಣ್ಣೂರು ಎಂಬ ಗ್ರಾಮವೇ ಇರಲಿಲ್ಲ. ಜೀತ ಮಾಡುತ್ತಿದ್ದವರಿಗೆ ಪರಿಹಾರ ಕೊಡಲು 1950ರಲ್ಲಿ ಸರಕಾರ ಆ ಕಾಲದಲ್ಲಿ ಈ ಜಮೀನನ್ನು 4 ಎಕರೆ, 5 ಎಕರೆ ಆಗಿ ಹಂಚಿದೆ. ಮನೆಯನ್ನೂ ಕೊಟ್ಟಿದೆ ಎಂದು ತಿಳಿಸಿದರು.
ಅಲ್ಲಿಂದ ಇಲ್ಲಿನವರೆಗೆ ಅವರು ವ್ಯವಸಾಯ ಮಾಡುತ್ತ ಬಂದಿದ್ದಾರೆ. ಅಂಥ ಜಮೀನನ್ನು ಅರಣ್ಯದ ಹೆಸರಿನಲ್ಲಿ ಕೆಲವು ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗೂ ಗೊತ್ತಿಲ್ಲದೇ, ಡಿಐಜಿಗೂ ತಿಳಿಯದಂತೆ, ಅವರ ಆದೇಶ ಇಲ್ಲದೇ ಸ್ಥಳೀಯ ಪೊಲೀಸ್ ಅಧಿಕಾರಿಗಳ ಮೂಲಕ ಕಬ್ಜಾ ಮಾಡಿದ್ದಾರೆ. ಈಗ ಗಿಡ ನೆಡಲಾಗುತ್ತಿದೆ ಎಂದು ಹೇಳಿದರು.
ಇದನ್ನು ಸದನದಲ್ಲಿ ಪ್ರಸ್ತಾಪಿಸಿದ್ದೆ. ಆಗ ಹಾರಿಕೆಯ ಉತ್ತರವನ್ನು ಸಚಿವರು ನೀಡಿದ್ದರು. ಈಗ ಕೂಲಂಕಷ ಪರಿಶೀಲಿಸಿ, ಅರಣ್ಯ ಇಲಾಖೆ ಈ ಜಮೀನು ವಶಕ್ಕೆ ಪಡೆಯಲಾಗದು ಎಂದು ಗೊತ್ತಾಗಿದೆ. ಕಬ್ಜಾ ಮಾಡಲು ಮುಂದಾದವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಲು ನಿನ್ನೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಕ್ರಮ ಜರುಗಿಸಲು ಮುಖ್ಯಮಂತ್ರಿಗಳು ಡಿಐಜಿ, ಮುಖ್ಯ ಕಾರ್ಯದರ್ಶಿಗೂ ತಿಳಿಸಿದ್ದಾರೆ ಎಂದರು. ಇದರಲ್ಲಿ ಒಳಗೊಂಡ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಲು ಹಾಗೂ ಜಮೀನು ವಾಪಸ್ ಕೊಡಿಸಬೇಕೆಂದು ಮನವಿ ಮಾಡಿದ್ದೇನೆ. ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಕೊಕ್ಕರೆ ಬೆಳ್ಳೂರು ಸಮಗ್ರ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ: ಶಾಸಕ ಕೆ.ಎಂ.ಉದಯ್
ಅದು ದೇವರ ಹಾಡು ಅದನ್ನ ನೀವು ಹೇಂಗೆ RSS ಗೀತೆ ಅಂತೀರಾ?: ಶಾಸಕ ಕೆ.ಎಂ ಉದಯ್ ಪ್ರಶ್ನೆ