ರಾಯಚೂರು : ರಾಯಚೂರು ಗ್ರಾಮೀಣ ಪೊಲೀಸರು ಲಾಡ್ಜ್ವೊಂದರ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ್ದಾರೆ. ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ 6ಮಹಿಳೆಯರನ್ನು ರಕ್ಷಣೆ ಮಾಡಿದ್ದು, ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿರುವ ಘಟನೆ ರಾಯಚೂರಲ್ಲಿ ನಡೆದಿದೆ.
ಹೌದು ರಾಯಚೂರು ಗ್ರಾಮೀಣ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆ ವೇಳೆ ಲಾಡ್ಜ್ ನಲ್ಲಿ ನಡೆಯುತ್ತಿದ್ದ ವೇಶ್ಯೆವಾಟಿಕೆ ರಾಕೆಟ್ನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಕನೂರು ಕ್ರಾಸ್ ಬಳಿ ಇರುವ ಮೇಘಾ ರೆಸ್ಟೋರೆಂಟ್ ಹೊಟೇಲ್ ಮೇಲೆ ದಾಳಿ ನಡೆಸಿದ ಪೊಲೀಸರು 6 ಮಹಿಳೆಯರನ್ನು ರಕ್ಷಿಸಿದ್ದು, ಈ ದುಷ್ಕೃತ್ಯಕ್ಕೆ ತೊಡಗಿದ್ದ ನಾಲ್ವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳು ಈ ಕೃತ್ಯಕ್ಕಾಗಿ ಬಳಸುತ್ತಿದ್ದ ಎರಡು ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಈ ಕಾರ್ಯಾಚರಣೆಯನ್ನು ರಾಯಚೂರು ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ಸಾಬಯ್ಯ ಹಾಗೂ ಪಿಎಸ್ಐ ಪ್ರಕಾಶ್ ಡಂಬಾಳ್ ನೇತೃತ್ವದಲ್ಲಿ ನಿರ್ವಹಿಸಲಾಯಿತು.