ಬೆಂಗಳೂರು : ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಘೋಷಣೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆರೋಗ್ಯ ಭಾಗ್ಯ ಹೆಚ್ಚಿಸಲು ಸಂಕಲ್ಪ ತೊಟ್ಟಿರುವ ನಮ್ಮ ಸರಕಾರ ಮುಂದಿನ 3 ವರ್ಷದೊಳಗೆ ಪ್ರತಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್, ಕ್ಯಾನ್ಸರ್ ಆಸ್ಪತ್ರೆ, ಹೃದ್ರೋಗ ಚಿಕಿತ್ಸಾ ಆಸ್ಪತ್ರೆ ನಿರ್ಮಾಣ ಮಾಡಲಿದೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಯಲ್ಲಿ ಎಲ್ಲರಿಗೂ, ಸುಲಭ ಹಾಗೂ ಸುಲಲಿತವಾಗಿ ಚಿಕಿತ್ಸೆ ದೊರೆಯುವಂತೆ ಮಾಡಲಾಗುವುದು. ನಾಗರಿಕರ ಯೋಗ ಕ್ಷೇಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವುದು. ಹುಬ್ಬಳ್ಳಿ ಮತ್ತು ಬೆಳಗಾವಿ ಭಾಗದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಶಾಖೆ ಶೀಘ್ರವಾಗಿ ಲೋಕಾರ್ಪಣೆ ಆಗಲಿದೆ ಎಂದರು.
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ತಂದಿದ್ದೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ರಾಜ್ಯಾದ್ಯಂತ ಮಾಡಲು ಆರಂಭಿಸಿದ್ದೇವೆ. ಕಲಬುರಗಿ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾರ್ಯಾರಂಭವಾಗಿದೆ. ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಇದೆ ಎಂದು ಹೇಳಿದ್ದಾರೆ.
ಕರ್ನಾಟಕವನ್ನು ಆರೋಗ್ಯಕರ ರಾಜ್ಯವನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಗುರಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ನಮ್ಮ ವೈದ್ಯಕೀಯ ಶಿಕ್ಷಣ ಇಲಾಖೆ ಮೂರು ವರ್ಷಗಳ ಅಭಿವೃದ್ಧಿ ಯೋಜನೆಗಳ ನೀಲನಕ್ಷೆ ಹಾಕಿಕೊಂಡಿದೆ.ಹುಬ್ಬಳ್ಳಿಯಲ್ಲಿ ಮುಂದಿನ ವರ್ಷ 400 ಹಾಸಿಗೆಗಳ ಜಯದೇವ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದೇವೆ. 2 ಲಕ್ಷದ 86 ಸಾವಿರ ಯುವಕರು ಯುವ ನಿಧಿ ಯೋಜನೆಯಲ್ಲಿ ನೋಂದಣಿ ಆಗಿದ್ದಾರೆ ಎಂದು ತಿಳಿಸಿದ್ದಾರೆ.