ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜೀನಾಮೆ ಕೇಳುವಂತ ಹೆಚ್.ಡಿ ಕುಮಾರಸ್ವಾಮಿಗೆ ನಾಚಿಕೆ ಆಗಬೇಕು. ಡಾ.ರಾಜ್ ಕುಮಾರ್ ತೀರಿಕೊಂಡಾಗ 4 ಜನರಿಗೆ ಗುಂಡು ಹೊಡೆಸಿದ್ರಲ್ಲ ಆಗ ಕುಮಾರಸ್ವಾಮಿ ರಾಜೀನಾಮೆ ಕೊಟ್ರಾ ಅಂತ ಸಾಗರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶ್ನಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಡಾ.ರಾಜ್ ಕುಮಾರ್ ತೀರಿಕೊಂಡಾಗ ನಾನು ಕಂಠೀರವ ಸ್ಟೂಡಿಯೋದಲ್ಲಿದ್ದೆ. ಆಗ ಕುಮಾರಸ್ವಾಮಿ ನಾಲ್ಕು ಜನರಿಗೆ ಗುಂಡೇಟು ಹೊಡೆಸಿದ್ರು. ಆಗ ರಾಜೀನಾಮೆ ನೀಡಿದ್ರಾ ಎಂದು ಪ್ರಶ್ನಿಸಿದರು. ಅಲ್ಲದೇ ಹಾವೇರಿಯಲ್ಲಿ ರೈತರ ಮೇಲೆ ಬಿಎಸ್ ಯಡಿಯೂರಪ್ಪ ಗೋಲಿಬಾರ್ ಮಾಡಿಸಿದ್ರು. ಆಗ ರಾಜೀನಾಮೆ ಕೊಟ್ರ? ಎಂದು ಕೇಳಿದರು.
ಇನ್ನೂ ಪಹಲ್ಗಾಮ್ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದರು, ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಉಂಟಾಗಿ ಹಲವರು ಸಾವನ್ನಪ್ಪಿದ್ರು, ಆಗ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಿದ್ರ? ಪ್ರಧಾನಿ ಮೋದಿ, ಅಮಿತ್ ಶಾ ರಾಜೀನಾಮೆ ಕೊಡಿಸಲಿ, ನಾವೂ ಕೂಡ ಸಿಎಂ, ಡಿಸಿಎಂ ರಾಜೀನಾಮೆ ಕೊಡಿಸ್ತೀವಿ ಅಂತ ಖಡಕ್ ತಿರುಗೇಟು ನೀಡಿದರು.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿನ ಕಾಲ್ತುಳಿತ ದುರಂತದಂತ ಘಟನೆ ನಡೆಯಬಾರದಿತ್ತು. ಆದರೆ ಆಗಿ ಹೋಗಿದೆ. ಅದಕ್ಕೆ ಪೊಲೀಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿದ್ದಾರೆ. ಅಲ್ಲದೇ ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ನೇಮಕ ಹಿಂಪಡೆಯಲಾಗಿದೆ. ರಾಜ್ಯದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಬೆಂಗಳೂರಿನ ಕಾಲ್ತುಳಿತ ದುರಂತ ಆಕಸ್ಮಿಕ ಘಟನೆಯಾಗಿದೆ. ನಾವು ಕೂಡ ನೋವಲ್ಲಿ ಇದ್ದೇವೆ. ಈ ಘಟನೆಯ ಬಗ್ಗೆ ಗೊಂದಲ ಸೃಷ್ಟಿಸಬಾರದು ಎಂಬುದಾಗಿ ತಿಳಿಸಿದರು.
ರಾಜ್ಯ ಸರ್ಕಾರ ಕಾಲ್ತುಳಿತ ದುರಂತದ ಬಗ್ಗೆ ನೀಡಿರುವಂತ 10 ಲಕ್ಷ ಪರಿಹಾರ ಸಾಕಾಗಲ್ಲ. ಕನಿಷ್ಠ 50 ಲಕ್ಷ ರೂಪಾಯಿ ಕೊಡಬೇಕು. ನಾನು ಕೂಡ ಸರ್ಕಾರಕ್ಕೆ ಈ ಬಗ್ಗೆ ಒತ್ತಾಯ ಮಾಡುತ್ತೇನೆ ಎಂದರು.