ಬೆಂಗಳೂರು : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಳಿಕ, ಯಶವಂತಪುರದ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಹಾಗೂ ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ.ಈ ವಿಚಾರವಾಗಿ ಉಚ್ಚಾಟನೆ ಯಾಕೆ ಮಾಡಿದ್ದೀರಿ ಅಂತಾನೂ ಕೇಳೋದಿಲ್ಲ. ನಾನು ಈಗ ಫ್ರೀ ಬರ್ಡ್ ಆಗಿದ್ದೀನಿ. 2028ರ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಇನ್ನೂ 10 ರಿಂದ 12 ಸೀಟುಗಳು ಖಾಲಿ ಆಗುತ್ತವೆ ಎಂದು ಶಾಸಕ ಎಸ್ ಟಿ ಸೋಮಶೇಖರ್ ಸ್ಫೋಟಕವಾದ ಹೇಳಿಕೆ ನೀಡಿದರು.
ಈ ವಿಚಾರವಾಗಿ ಬೆಂಗಳೂರಲ್ಲಿ ಮಾತನಾಡಿದ ಶಾಸಕ ಎಸ್.ಟಿ ಸೋಮಶೇಖರ್, ಬೆಳಿಗ್ಗೆ 10:30ಕ್ಕೆ ಮೊಬೈಲ್ ನೋಡ್ತಾ ಇದ್ದೆ ಅವಾಗ ನನಗೆ ನೋಟಿಸ್ ಬಂದಿತ್ತು. ಉಚ್ಚಾಟನೆ ಮಾಡಿ ಹೈಕಮಾಂಡ್ ಒಳ್ಳೆಯ ನಿರ್ಧಾರ ಮಾಡಿದೆ. ಅಮಾವಾಸ್ಯೆಯ ದಿನ ಒಳ್ಳೇದು ಮಾಡಿದ್ದಾರೆ ಸಂತೋಷ. ಚುನಾವಣೆ ವೇಳೆ ಬಿಜೆಪಿಯ ಇನ್ನೂ 10-12 ಸೀಟ್ ಖಾಲಿ ಆಗಲಿವೆ. ಚುನಾವಣೆ ಘೋಷಣೆ ಆದಾಗ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಉದ್ಘಾಟನೆಗೂ ಮುನ್ನ ಶಿಸ್ತು ಸಮಿತಿಯಿಂದ ನೋಟಿಸ್ ಬಂದಿತ್ತು. ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ನಾನು ಉತ್ತರಿಸಿದ್ದೆ.
ಬಿಜೆಪಿಯಲ್ಲಿ ರೇಪ್ ಮಾಡಿದವರನ್ನು ಉಚ್ಚಾಟನೆ ಮಾಡುವುದಿಲ್ಲ. ನಮ್ಮಂತವರನ್ನು ಉಚ್ಚಾಟನೆ ಮಾಡ್ತಾರೆ. ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು ಒಳ್ಳೆಯದಾಯ್ತು. ಉಚ್ಚಾಟನೆ ಯಾಕೆ ಮಾಡಿದ್ದೀರಿ ಅಂತಾನೂ ಕೇಳೋದಿಲ್ಲ. ನಾನು ಈಗ ಫ್ರೀ ಬರ್ಡ್ ಆಗಿದ್ದೀನಿ. ಇನ್ನು ಫ್ರೀ ಬರ್ಡ್ ಆಗಿ ಓಡಾಡುತ್ತೇನೆ. ಕಾಂಗ್ರೆಸ್ ಇಲ್ಲ, ಬಿಜೆಪಿ ಇಲ್ಲ ಆರಾಮಾಗಿ ಇದ್ದೇವೆ. ಮುಂದಿನ ನಡೆ ಬಗ್ಗೆ ಈಗ ಯೋಚನೆ ಮಾಡಿಲ್ಲ ಎಂದರು.
1% ಸಹ ಬೇಸರ, ಅಸಮಾಧಾನ ಇಲ್ಲ. ಉಚ್ಚಾಟನೆ ಮಾಡಿದ್ದು ಖುಷಿ ಇದೆ. ಬಿಜೆಪಿಯಲ್ಲಿ ನನ್ನ ಪರವಾಗಿ ಮಾತನಾಡಲು ಯಾರಿಗೂ ಧೈರ್ಯ ಇಲ್ಲ. ಬಿಜೆಪಿಯಲ್ಲಿ ಮಾಡಬಾರದ್ದನ್ನ ಮಾಡಿರೋರು ಯರ್ಯಾರೋ ಇದ್ದಾರೆ. ಅತ್ಯಾಚಾರದ ಆರೋಪ ಹೊತ್ತಿರೋರು ಇದ್ದಾರೆ. ಅವರೆಲ್ಲರನ್ನೂ ಬಿಟ್ಟು ನನ್ನ ಉಚ್ಛಾಟನೆ ಮಾಡಿದ್ದಾರೆ ಎಂದು ಹೇಳಿದರು.