ನವದೆಹಲಿ : ವೈರಿ ಪಾಕಿಸ್ತಾನದ ಪರ ಗೂಢಚಾರಿಕೆ ಮಾಡುತ್ತಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ವ್ಲಾಗರ್ ಜ್ಯೋತಿ ಮಲ್ಹೋತ್ರಾಗೆ ಇದೀಗ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಹರಿಯಾಣದ ಹಿಸಾರ್ ಕೋರ್ಟ್ ಆದೇಶ ಹೊರಡಿಸಿದೆ.
9 ದಿನಗಳ ಪೊಲೀಸ್ ಕಸ್ಟಡಿ ಬಳಿಕ ಜ್ಯೋತಿ ಮಲ್ಹೋತ್ರಾಳನ್ನು ಇಂದು ಹರಿಯಾಣದ ಹಿಸಾರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈಗಾಗಲೇ ಎರಡು ಬಾರಿ ಪೊಲೀಸ್ ಕಸ್ಟಡಿಗೆ ಪಡೆದು ಜ್ಯೋತಿಯನ್ನು ವಿಚಾರಣೆಯನ್ನು ನಡೆಸಲಾಗಿದೆ. ಇಂದು ಜ್ಯೋತಿಗೆ 14 ದಿನಗಳ ಕಾಲ ನ್ಯಾಯಾಂಗ ಬಂದನಕೆ ನೀಡಿ ಕೋರ್ಟ್ ಆದೇಶಿಸಿದೆ. ಗೂಢಚರ್ಯೆಯ ಶಂಕೆಯ ಮೇಲೆ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಿಂದ ಬಂಧಿಸಲ್ಪಟ್ಟ 12 ಜನರಲ್ಲಿ ಮಲ್ಹೋತ್ರಾ ಕೂಡ ಒಬ್ಬಳಾಗಿದ್ದಾಳೆ.
ಈ 12 ಜನರು ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಮೇ 16 ರಂದು ಅಧಿಕೃತ ರಹಸ್ಯ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿ ಬಂಧಿಸಲಾಯಿತು. ನವೆಂಬರ್ 2023 ರಿಂದ ಪಾಕಿಸ್ತಾನಿ ಹೈಕಮಿಷನ್‌ನ ಉದ್ಯೋಗಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಜೊತೆ ಆಕೆ ಸಂಪರ್ಕದಲ್ಲಿದ್ದಾಳೆ ಎಂದು ಹೇಳಲಾಗಿತ್ತು. ಬೇಹುಗಾರಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಭಾರತ ಮೇ 13 ರಂದು ಡ್ಯಾನಿಶ್‌ನನ್ನು ಹೊರಹಾಕಿತು.
ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ತನ್ನ ಪ್ರವಾಸಕ್ಕೆ ಹಲವಾರು ಪ್ರಾಯೋಜಕತ್ವ ಪಡೆಯುತ್ತಿದ್ದಳು. ಪಾಕಿಸ್ತಾನಕ್ಕೆ ತೆರಳಲು ಆಕೆಗೆ ಯುಎಇ ಮೂಲದ ವೀಗೋ ಸಂಸ್ಥೆಯು ಪ್ರಾಯೋಜಕತ್ವ ನೀಡಿತ್ತು ಎಂದು ಹರ್ಯಾಣ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ‘ಟ್ರಾವೆಲ್ ವಿತ್ ಜೋ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಜ್ಯೋತಿ, ವೇದಿಕೆಯಲ್ಲಿ ಸುಮಾರು 4 ಲಕ್ಷ ಚಂದಾದಾರರನ್ನು ಹೊಂದಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿಯೂ ಸಹ ಅವರು 1,32,000 ಅನುಯಾಯಿಗಳನ್ನು ಹೊಂದಿದ್ದಾಳೆ.