ಬೆಂಗಳೂರು : ಇಂದು ಬೆಂಗಳೂರು ಮಹಾನಗರದಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಮಳೆಯಿಂದಾಗಿ ಹತ್ತಾರು ಅವಾಂತರಗಳು ಸೃಷ್ಟಿಯಾಗಿದ್ದು, ಭಾರಿ ಮಳೆಯಿಂದಾಗಿ ಮಾನ್ಯತಾ ಟೆಕ್ ಪಾರ್ಕ್ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ. ಮಾನ್ಯತಾ ಟೆಕ್ ಪಾರ್ಕ್ ಬಳಿ BMTC ಬಸ್ಸಿಗೆ ನೀರು ನುಗ್ಗಿದೆ.
ಕಾವೇರಿ ಜಂಕ್ಷನ್ ಬಳಿ ಮರದ ಕೊಂಬೆ ಒಂದು ಮುರಿದು ಬಿದ್ದಿದೆ. ವಿಂಡ್ಸರ್ ಮ್ಯಾನರ್ ಅಂಡರ್ ಪಾಸ್ ನಿಂದ ಅರಮನೆ ಮೈದಾನದತ್ತ ತೆರಳುವ ಮಾರ್ಗದಲ್ಲಿ ಮರದ ಕೊಂಬೆ ಮುರಿದುಬಿದ್ದಿದೆ. ಈ ವೇಳೆ ಯಾವುದೇ ವಾಹನ ಸಂಚಾರ ಇಲ್ಲದಿದ್ದರಿಂದ ಭಾರಿ ಅನಾಹುತ ಒಂದು ತಪ್ಪಿದೆ. ಹತ್ತರಿಂದ ಹದಿನೈದು ನಿಮಿಷ ಸುರಿದ ಮಳೆಗೆ ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ.
ಶೇಷಾದ್ರಿಪುರಂನಲ್ಲಿ ರಸ್ತೆಯ ಮೇಲೆ ನೀರು ನದಿಯಂತೆ ಹರಿಯುತ್ತಿದೆ. ಜಯನಗರದಲ್ಲಿ ವಾಹನ ಸವಾರರು ಪರದಾಟ ನಡೆಸಿದರು. ಕೆರೆಯಂತಾದ ರಸ್ತೆಯಲ್ಲಿ ಬಿಎಂಡಬ್ಲ್ಯೂ ಕಾರು ಚಾಲಕ ಪರದಾಟ ನಡೆಸಿದ್ದಾನೆ. ಕಲ್ಯಾಣ ನಗರ ಬಾಣಸವಾಡಿ ಸುತ್ತಮುತ್ತಲು ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ.