ಬೆಂಗಳೂರು: 2025ರ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಹಾಜರಾತಿ ಕೊರತೆಯ ಕಾರಣ ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗದ ಅರ್ಹ ವಿದ್ಯಾರ್ಥಿಗಳಿಗೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಗುಡ್ ನ್ಯೂಸ್ ನೀಡಲಾಗಿದೆ. ಅದೇ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಈ ಸಂಬಂಧ ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಸುತ್ತೋಲೆ ಹೊರಡಿಸಲಾಗಿದ್ದು, 2025 ರ ದ್ವಿತೀಯ ಪಿಯುಸಿ ಪರೀಕ್ಷೆ-1 ಕ್ಕೆ ಹಾಜರಾತಿ ಕೊರತೆಯ ಕಾರಣ ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗದ ದಿನಾಂಕ: 31-03-2025 ಕ್ಕೆ 17 ವರ್ಷ ತುಂಬಿದ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪ್ರಸ್ತುತ ಪಿಯು ಪರೀಕ್ಷೆ – 2 ಕ್ಕೆ ಕಲಾ ಮತ್ತು ವಾಣಿಜ್ಯ ವಿಭಾಗಕ್ಕೆ ಆಯ್ತ ಸಂಯೋಜನೆಗಳೊಂದಿಗೆ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಳ್ಳಲು ಅರ್ಹರಿದ್ದು, ಅವರುಗಳು ಮಂಡಲಿಯ ನಿಯಮಾನುಸಾರ ತಾವು ಅಭ್ಯಸಿಸಿದ ಕಾಲೇಜಿನಲ್ಲಿಯೇ ನೋಂದಾಯಿಸಿಕೊಳ್ಳಲು ಉಲ್ಲೇಖಿತ ಇ-ಕಛೇರಿ ಕಡತದಲ್ಲಿ ಸರ್ಕಾರವು ಅನುಮತಿ ನೀಡಿರುತ್ತದೆ ಎಂದಿದೆ.
ಈ ಹಿನ್ನೆಲೆಯಲ್ಲಿ ಏಪ್ರಿಲ್ ಹಾಗೂ ಮೇ ಮಾಹೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ವತಿಯಿಂದ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ-2 ಕ್ಕೆ ನೋಂದಾಯಿಸಿಕೊಳ್ಳಲು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರುಗಳು ಈ ಕೆಳಗೆ ನಮೂದಿಸಿರುವಂತೆ ಅಗತ್ಯ ಕ್ರಮ ವಹಿಸುವುದು. ಖಾಸಗಿ ಅಭ್ಯರ್ಥಿಯಾಗಿ ನೊಂದಾಯಿಸಿಕೊಳ್ಳುವ ಸಮಯದಲ್ಲಿ ಪ್ರತಿ ಅಭ್ಯರ್ಥಿಯು ಕಾಲೇಜಿನಲ್ಲಿ ಪಾವತಿಸಬೇಕಾದ ಶುಲ್ಕದ ವಿವರ ಈ ಕೆಳಗಿನಂತಿದೆ.
- ನೋಂದಣಿ ಶುಲ್ಕ ( ನೋಂದಣಿ ಶುಲ್ಕವನ್ನು ಕಾಲೇಜಿನಲ್ಲಿಯೇ ಉಳಿಸಿಕೊಂಡು ಅಂಚೆ ವೆಚ್ಚ ಹಾಗೂ ಪರಿಶೀಲನಾ ಶುಲ್ಕವಾಗಿ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಉಪಯೋಗಿಸಬಹುದು)- ಇತರರು ರೂ.60, ಎಸ್ಸಿ, ಎಸ್ಟಿ, ಪ್ರವರ್ಗ-1ರ ಅಭ್ಯರ್ಥಿಗಳಇಗೆ ರೂ.60
- ದಾಖಲಾತಿ ಶುಲ್ಕ ಇತರರು ರೂ.400, ಎಸ್ಸಿ, ಎಸ್ಟಿ, ಪ್ರವರ್ಗ-1 ರೂ.400
- ಕಾಲೇಜು ಅಭಿವೃದ್ಧಿ ಶುಲ್ಕ (ವಸೂಲಾದ ಈ ಶುಲ್ಕವನ್ನು ಕಾಲೇಜು ಸಂಚಿತ ನಿಧಿಗೆ ಜಮೆ ಮಾಡಿ ಮೂಲಭೂತ ಸೌಕರ್ಯಗಳಿಗಾಗಿ ಉಪಯೋಗಿಸಲು ಪ್ರಸ್ತಾವನೆ ಕಳುಹಿಸಿ ನಿರ್ದೇಶಕರ ಅನುಮತಿ ಪಡೆಯಬೇಕು)- ಇತರರಿಗೆ ರೂ.1020, ಎಸ್ಸಿ, ಎಸ್ಟಿ, ಪ್ರವರ್ಗ-1ಕ್ಕೆ ರೂ.1020.
- ಪರಿಶಿಷ್ಟ ಜಾತಿ ಮತ್ತು ಪಂಗಡ, ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಶುಲ್ಕ- ಇತರರಿಗೆ ರೂ.80, ಎಸ್ಸಿ, ಎಸ್ಟಿ ಪ್ರವರ್ಗ-1ರ ಅಭ್ಯರ್ಥಿಗಳಿಗೆ ರೂ.80
- ಪರೀಕ್ಷಾ ಶುಲ್ಕ- ಇತರ ಅಭ್ಯರ್ಥಿಗಳಿಗೆ ರೂ.400.
- ಒಟ್ಟು ಮೊತ್ತ ಇತರರು ರೂ.1960 ಆಗಿದ್ದರೇ, ಎಸ್ಸಿ, ಎಸ್ಟಿ, ಪ್ರವರ್ಗ-1ರ ಅಭ್ಯರ್ಥಿಗಳಿಗೆ ರೂ.1560
ಯಾವುದೇ ಕಾರಣಕ್ಕೂ ಮೇಲೆ ನಮೂದಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ವಸೂಲು ಮಾಡಬಾರದು. ಮೇಲಿನ ಶುಲ್ಕವನ್ನು ಪಾವತಿಸುವ ಸಂಬಂಧ ಪ್ರಾಂಶುಪಾಲರ PU EXAM-2 ಲಾಗಿನ್‌ನಲ್ಲಿ ಚಲನ್ ಸೃಜಿಸಲು ಅವಕಾಶ ಕಲ್ಪಿಸಿದ್ದು, ಶುಲ್ಕ ಪಾವತಿಯ ಮಾಹಿತಿಯನ್ನು ಚಲನ್ ನಲ್ಲಿ ಅಪ್ಲೋಡ್ ಮಾಡಿ ಸದರಿ ಚಲನ್ ಅನ್ನು ಮುದ್ರಿಸಿಕೊಂಡು ನಿಗದಿತ ಶುಲ್ಕವನ್ನು ಬೆಂಗಳೂರು-ಒನ್, ಕರ್ನಾಟಕ ಒನ್, ಗ್ರಾಮ-ಒನ್ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳ ಮೂಲಕ ಪಾವತಿಸುವುದು. ಶುಲ್ಕವನ್ನು ಪಾವತಿಸಲು ಕಡೆಯ ದಿನಾಂಕ: 17-04-2025 ಆಗಿರುತ್ತದೆ ಎಂದು ತಿಳಿಸಿದೆ.