ಕೊಪ್ಪಳ : ಕೊಪ್ಪಳದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ವಾಣಿಜ್ಯ ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಸುಮಾರು ಒಂದು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನಡೆದಿದೆ.
ಕೊಪ್ಪಳ ರಸ್ತೆಯ ಸಿಬಿಎಸ್ ವೃತ್ತದ ಸಮೀಪದ ಹಳೇಯ ಪವನಬಾರ್ ಬಳಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ದಾದಾಪೀರ್ ಎಂಬುವರಿಗೆ ಸೇರಿದ ಈ ಅಂಗಡಿಯಲ್ಲಿ ಹೊಸ ಜನರೇಟರ್, ಕೃಷಿ ಮತ್ತು ರೈತರಿಗೆ ಉಪಯುಕ್ತವಾಗುವ ಯಂತ್ರೋಪಕರಣಗಳ ಮಾರಾಟ ಮಾಡಲಾಗುತಿತ್ತು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಉಂಟಾದ ಬೆಂಕಿಯಿಂದ ಹೊಗೆ ಮಳಿಗೆಯಿಂದ ಹೊರ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಕೂಡಲೇ ದಾದಾಪೀರ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸುವ ಹೊತ್ತಿಗೆ ಅಂಗಡಿಯಲ್ಲಿದ್ದ ಬಹುತೇಕ ವಸ್ತುಗಳು ಬೆಂಕಿಗೆ ನಾಶವಾಗಿದ್ದವು.
ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದರೆ, ಈ ಹೊತ್ತಿಗಾಗಲೆ ಅಂಗಡಿಯಲ್ಲಿದ್ದ ಬಹುತೇಕ ಹೊಸ ಉಪಕರಣಗಳು ಹಾಗೂ ರೈತರು ರಿಪೇರಿಗೆ ನೀಡಿದ್ದ ಕೃಷಿ ಪರಿಕರಗಳು ಸುಟ್ಟು ಕರಕಲಾಗಿವೆ. ಸ್ಥಳೀಯ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.