ಬೆಂಗಳೂರು : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮುಖಾಂತರ ಸರ್ಕಾರದ ಮಹತ್ತರ ಖಾತರಿ ಯೋಜನೆಯಾದ ‘ಯುವನಿಧಿ’ ಯೋಜನೆ ಫಲಾನುಭವಿಗಳು ಮಾರ್ಚ್ 25 ರೊಳಗೆ ತಪ್ಪದೇ ಡಿಕ್ಲರೇಶನ್ ಮಾಡುವಂತೆ ಸೂಚನೆ ನೀಡಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರವು ಪದವಿ ಹಾಗೂ ಡಿಪ್ಲೋಮಾ ಕೋರ್ಸ್‍ಗಳನ್ನು 2023-24 ನೇ ಸಾಲಿನಲ್ಲಿ ತೇರ್ಗಡೆಯಾದ ಕರ್ನಾಟಕ ರಹವಾಸಿಗಳಿಗೆ ನಿರುದ್ಯೊಗಿ ಭತ್ಯೆಯನ್ನು ನೀಡುವ ಖಾತರಿ ಯೋಜನೆಯಾಗಿದೆ.
ಯಾವುದೇ ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿ ಸರ್ಕಾರಿ, ಖಾಸಗಿ, ಸ್ವಯಂ ಉದ್ಯೋಗ ಹೊಂದಿಲ್ಲದವರು ಮತ್ತು ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವ ವಿದ್ಯಾರ್ಥಿಗಳು ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ http://sevasindhugs.karnataka.gov.in ಪೋರ್ಟಲ್ ಮೂಲಕ ಉಚಿತವಾಗಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಎಲ್ಲಾ ಪದವೀಧರರಿಗೆ, ಸ್ನಾತಕೋತ್ತರ ಪದವಿ, ಬಿಎಡ್ ಪದವೀಧರರಿಗೆ ಪ್ರತಿ ತಿಂಗಳು ರೂ.3 ಸಾವಿರ ಗಳು ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ.1500 ಗಳನ್ನು ನಿರುದ್ಯೋಗ ಭತ್ಯೆಯನ್ನಾಗಿ ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳವರೆಗೆ ನೀಡಲಾಗುತ್ತದೆ.
ಹಾಗೆಯೇ ಈಗಾಗಲೇ ಯುವನಿಧಿ ಯೋಜನೆಗೆ ಅರ್ಹರಾದ ಎಲ್ಲಾ ಫಲಾನುಭವಿಗಳು ಪ್ರತಿ ಮಾಹೆಯ 25 ನೇ ತಾರೀಖಿನ ಒಳಗೆ ಉನ್ನತ ವ್ಯಾಸಂಗ ಮುಂದುವರೆಸದಿರುವ ಕುರಿತು ಹಾಗೂ ಯಾವುದೇ ಉದ್ಯೋಗ ಹೊಂದಿಲ್ಲದಿರುವ ಕುರಿತು ‘ಸೇವಾಸಿಂಧು’ ಪೋರ್ಟಲ್ http://sevasindhugs.karnataka.gov.in ನಲ್ಲಿ ಕಡ್ಡಾಯವಾಗಿ ಸ್ವಯಂ ಘೋಷಣೆ ನೀಡಿದರೆ ಮಾತ್ರ ಮುಂದಿನ ತಿಂಗಳ ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಸೂಚನೆ ನೀಡಲಾಗಿದೆ.
ಸ್ವಯಂಘೋಷಣಾ ಪತ್ರ ಕಡ್ಡಾಯ
ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಹೆಸರು ನೋಂದಣಿ ಮಾಡಿಕೊಂಡವರೆಲ್ಲ ಅರ್ಹತೆ ಪಡೆಯುವುದಿಲ್ಲ. ನಿಗದಿತ ಮಾನದಂಡದ ಪ್ರಕಾರ ಒಂದು ತಿಂಗಳು ನಿರುದ್ಯೋಗ ಭತ್ಯೆ ಪಡೆದವರು ಪ್ರತೀ ತಿಂಗಳು ಘೋಷಣಾಪತ್ರ ಅಪ್‌ಡೇಟ್ ಮಾಡಿದರೆ ಮಾತ್ರ ಭತ್ಯೆ ಪಡೆಯುತ್ತಾರೆ. ನಿರುದ್ಯೋಗಿ ಪದವೀಧರ ಅಥವಾ ಡಿಪ್ಲೊಮಾ ಮಾಡಿದವರು ಪ್ರತಿ ತಿಂಗಳು ನೌಕರಿ, ಉನ್ನತ ವ್ಯಾಸಂಗ ಇಲ್ಲವೇ ಸ್ವಯಂ ಉದ್ಯೋಗಕ್ಕೆ ಬ್ಯಾಂಕ್ ಸಾಲ ಪಡೆದಿಲ್ಲವೆಂದು ಸ್ವಯಂ ಘೋಷಣಾಪತ್ರ ಸಲ್ಲಿಸಿದರೆ ಭತ್ಯೆಗೆ ಪರಿಗಣಿಸಲಾಗುತ್ತದೆ.