ಮೈಸೂರು: ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟದ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದಾರೆ. ಮಾರ್ಚ್.3ರಿಂದ 22ರವರೆಗೆ ಸಾಲು ಸಾಲು ಪ್ರತಿಭಟನೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ ಮಾರ್ಚ್.22ರಂದು ಅಖಂಡ ಕರ್ನಾಟಕ ಬಂದ್ ಮಾಡುವುದಾಗಿ ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕಾಶ – ಭೂಮಿ ಒಂದಾದರೂ ಸರಿ. ಮಾರ್ಚ್ 22 ರಂದು ಅಖಂಡ ಕರ್ನಾಟಕ ಬಂದ್ ಮಾಡಿಯೇ ತೀರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಗಡಿ ನಾಡು, ಕನ್ನಡ, ಕನ್ನಡಿಗರ ಶಕ್ತಿ ಪ್ರದರ್ಶನ ಮಾಡುತ್ತೇವೆ. ಕನ್ನಡಿಗರ ಶಕ್ತಿ ದೇಶಕ್ಕೆ ಗೊತ್ತಾಗಬೇಕು. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಅಭಿ ವೃದ್ಧಿ ಆಗಬೇಕು. ಕೇಂದ್ರ ರಾಜ್ಯವನ್ನು ಕಡೆಗಣಿಸಿದ್ದನ್ನು ವಿರೋಧಿಸುತ್ತೇವೆ. ಕರ್ನಾಟಕದಲ್ಲಿ ಹಿಂದೆ ಕಂಡಿರದ ಬಂದ್ ಇದಾಗಬೇಕು. 1900 ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದರು.
ಮಾರ್ಚ್.22ರಂದು ಅಖಂಡ ಕರ್ನಾಟಕ ಬಂದ್ ಗೆ ನಿರ್ಧರಿಸಲಾಗಿದೆ. ಅಂದು ಹೋಟೆಲ್, ಅಂಗಡಿ ಮುಂಗಟ್ಟುಗಳು, ಸಾರಿಗೆ ಸಂಚಾರ ಬಂದ್ ಆಗಲಿದೆ. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್ ಇರಲಿದೆ ಎಂದರು.
ಬೆಂಗಳೂರಲ್ಲಿ ಮಾರ್ಚ್.22ರಂದು ಟೌನ್ ಹಾಲ್ ನಿಂದ ಪ್ರತಿಭಟನೆ ನಡೆಯಲಿದೆ. ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂಬುದಾಗಿ ತಿಳಿಸಿದರು.