ಶಿವಮೊಗ್ಗ : ರಾಜ್ಯದ ಅತಿಥಿ ಶಿಕ್ಷಕರಿಗೆ ಸಚಿವ ಮಧು ಬಂಗಾರಪ್ಪ ಸಿಹಿ ಸುದ್ದಿ ನೀಡಿದ್ದು, ಶೀಘ್ರದಲ್ಲಿ ಬಾಕಿ ವೇತನ ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.ಈ ಕುರಿತು ಅವರು ನಿನ್ನೆ ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಅತಿಥಿ ಶಿಕ್ಷಕರಿಗೆ ನಾವು ಕೊಡುವುದೇ ಕಡಿಮೆ ಸಂಬಳ. ತಾಂತ್ರಿಕ ಸಮಸ್ಯೆಯಿಂದಾಗಿ ಕೆಲ ತಿಂಗಳದಿಂದ ಅವರಿಗೆ ಸಂಬಳ ಆಗಿರಲಿಲ್ಲ. ಈಗ ಎಲ್ಲಾ ಅತಿಥಿ ಶಿಕ್ಷಕರಿಗೂ ಬಾಕಿ ಇರುವ ವೇತನ ಬಿಡುಗಡೆ ಮಾಡುತ್ತೇವೆ. ಸಂಬಳ ನಿಲ್ಲಿಸುವ ಪ್ರಶ್ನೆ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಮಕ್ಕಳಿಗೆ ಕೌಶಲ್ಯ ಭರಿತ ಶಿಕ್ಷಣ ನೀಡಲು ಒತ್ತು ನೀಡುತ್ತಿದ್ದೇವೆ. ಕಲಿಕೆಗೆ ಪೂರಕವಾದ ಹೊಸ ವಿಧಾನಗಳನ್ನು ಕೂಡ ಅಳವಡಿಸಿ ಮಕ್ಕಳಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತಿದ್ದೇವೆ.ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ಕೇಳಿದ್ದೇನೆ. ಪ್ರಮುಖವಾಗಿ ನೂತನ ಕ್ಲಾಸ್ ರೂಮ್‌ಗಳು ಮತ್ತು ಶಿಕ್ಷಕರ ನೇಮಕಾತಿಯ ಅಗತ್ಯವಿದೆ. ಈ ಬಗ್ಗೆಯೂ ಮುಖ್ಯಮಂತ್ರಿಗಳಿಗೆ ಬೇಡಿಕೆ ಇಟ್ಟಿದ್ದೇನೆ ಕಲ್ಯಾಣ ಕರ್ನಾಟಕದ ನೇಮಕಾತಿಯಲ್ಲಿ ಶೇ.80ರಷ್ಟು ನೇಮಕ ಮಾಡಲು ಅನುಮತಿ ಸಿಕ್ಕಿದೆ. ಕಳೆದ ಸಾಲಿನಲ್ಲಿ ಸುಮಾರು 1500 ಕೋಟಿ ಶಿಕ್ಷಣ ಇಲಾಖೆಗೆ ಅನುದಾನ ಬಂದಿದೆ ಎಂದು ತಿಳಿಸಿದರು.