ಶಿವಮೊಗ್ಗ: ಕನ್ನಡದ ನೆಲೆಗಟ್ಟಿನಲ್ಲಿ ಸಿನಿಮಾ, ಸಮೂಹ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಂತಹ ಜನಪ್ರಿಯ ಸಂಸ್ಕೃತಿಯ ಆಧುನಿಕ ಪ್ರಕಾರಗಳ ಬಗ್ಗೆ ಗಂಭೀರವಾದ ಅಧ್ಯಯನ ಈ ಹೊತ್ತಿನ ತುರ್ತು ಎಂದು ಸಂಸ್ಕೃತಿ ಚಿಂತಕ ಡಾ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂದು ನಡೆದ ಡಾ. ಜಿ. ಪ್ರಶಾಂತ್ ನಾಯಕ್ ಅವರ ‘ಕನ್ನಡ ಸಿನಿಮಾ ಹಾಡುಗಳು: ಭಾವಾನುಬಂಧ’ ಮತ್ತು ‘ಬುದ್ಧ: ಬೆಳಕು ಮತ್ತು ಎಚ್ಚರ’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಜನಪ್ರಿಯ ಸಮೂಹ ಮಾಧ್ಯಮಗಳ ಸಂಕೀರ್ಣ ಸಂರಚನೆಯ ಸ್ವರೂಪವನ್ನು ಲೇಖಕರು ಸಶಕ್ತವಾಗಿ ತಮ್ಮ ಕೃತಿಗಳಲ್ಲಿ ಸೆರೆಹಿಡಿದಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ, ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಪೌರಾಣಿಕ ಕಥಾನಕಗಳು, ಕನ್ನಡ ಸೇರಿದಂತೆ ಭಾರತದ ವಿವಿಧ ಭಾಷೆಗಳ ಚಲನಚಿತ್ರಗಳು ಅದ್ಭುತವಾಗಿ ತೆರೆಯಮೇಲೆ ಅನಾವರಣಗೊಳಿಸಿದ್ದು, ಇವು ನಮ್ಮ ಒಟ್ಟಾರೆ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎ ಎಸ್ ಪ್ರಭಾಕರ್ ಮಾತನಾಡಿ, ಬುದ್ಧ ಎಂದರೆ, ಬೆಳಕು ಮತ್ತು ಎಚ್ಚರ. ಬೆಳಕೆನ್ನುವುದು ಕತ್ತಲೆಯ ವಿರುದ್ಧದ ಪದವಲ್ಲ. ಅದು ಒಂದರ ಒಳಗೊಂದು ಬೆಳೆದು ಬಂದ ಸಂಸ್ಕೃತಿ. ಎಚ್ಚರ ಎಂದರೆ, ನಿದ್ರೆಯಿಂದ ಏಳುವುದಲ್ಲಾ ಸದಾ ಜಾಗೃತರಾಗಿರುವುದು ಎಂದು ಹೇಳಿದರು.
ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಸಮಕಾಲೀನ ಸಂದರ್ಭದಲ್ಲಿ ಬುದ್ಧನ ಮೂರ್ತಿಗಳು ಮಾರಾಟದ ಸರಕುಗಳಾಗಿವೆ. ಅವರ ತತ್ವಗಳ ಹಾದಿಯಲ್ಲಿ ಸಾಗುವ ಬದಲು ಪಾರ್ಕ್, ಮನೆಗಳಲ್ಲಿ ಬುದ್ಧನ ಮೂರ್ತಿಯನ್ನು ಅಲಂಕಾರಿಕ ವಸ್ತುಗಳನ್ನಾಗಿ ಬಳಸುತ್ತಿರುವುದು ನಮ್ಮ ದುರದೃಷ್ಟ. ಅಷ್ಟೇ ಅಲ್ಲದೆ ಹಿಂದುತ್ವದ ಹೆಸರಿನಲ್ಲಿ ದ್ವೇಷ ಭಾಷೆಯನ್ನು ಬಳಸಿ ಭಾರತೀಯ ಸಂಸ್ಕೃತಿಗೆ ಅನ್ಯಾಯವೆಸಗಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ವೇಳೆ ಕುಲಸಚಿವ ಎ ಎಲ್ ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಕನ್ನಡ ಭಾರತಿ ನಿರ್ದೇಶಕ ಪ್ರೊ. ಶಿವಾನಂದ ಕೆಳಗಿನಮನಿ, ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್, ಸುವ್ವಿ ಪ್ರಕಾಶನದ ಸುನೀಲ್ ಕುಮಾರ್ ಬಿ. ಎನ್, ವಿವಿಧ ವಿಭಾಗಗಳ ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ವರ್ಷ 7.85 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ: ಸಚಿವ ಜಮೀರ್ ಅಹ್ಮದ್
ಮೈಕ್ರೋ ಫೈನಾನ್ಸ್ ನಿಯಂತ್ರಣದ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು: ಮಂಡ್ಯ ಡಿಸಿ ಡಾ| ಕುಮಾರ