ಚಿಕ್ಕಬಳ್ಳಾಪುರ : ಕೋವಿಡ್ ವೇಳೆ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಚೈನ್ನೈ ಮೂಲದ ಮೈಕ್ರೋ ಫೈನಾನ್ಸ್ ಗೆ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ ಗಂಭೀರವಾದ ಆರೋಪ ಮಾಡಿದರು.
ಸುಧಾಕರ್ ಅವರು ಚೆನ್ನೈ ಮೂಲದ ಮೈಕ್ರೋ ಫೈನಾನ್ಸ್ ಗೆ ಹಣ ವರ್ಗಾವಣೆ ಮಾಡಿದ್ದಾರೆ. ಸುಧಾಕರ್ ಗೆ ಚಾಲೆಂಜ್ ಮಾಡುತ್ತೇನೆ. ನಾನಾ ನೀನಾ ನೋಡೇ ಬಿಡೋಣ ಡಾ.ಕೆ. ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಹಾಗೂ ಕ್ಷೇತ್ರಕ್ಕೆ ಶಾಪವಿದ್ದಂತೆ ಎಂದು ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ ಡಾ.ಕೆ ಸುಧಾಕರ್ ವಿರುದ್ಧ ತೀವ್ರವಾದ ವಾಗ್ದಾಳಿ ನಡೆಸಿದ್ದಾರೆ.
ಸಂಸದ ಕೆ.ಸುಧಾಕರ್ ಚಾರಿತ್ರ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಗೊತ್ತಾಗಲಿ. ಸುಧಾಕರ್ ರದ್ದು ಹೀನ ಮನಸು, ಅವರು ಸ್ವಂತ ಶಕ್ತಿಯಿಂದ ಸಂಸದರಾಗಿಲ್ಲ. ಮೋದಿ ವರ್ಚಸ್ಸಿನಿಂದ ಮಾತ್ರ ಕೆ.ಸುಧಾಕರ್ ಸಂಸದರಾಗಿದ್ದಾರೆ. ಸುಧಾಕರ್ ಈಗಲಾದರೂ ತನ್ನ ತಪ್ಪು, ದರ್ಬಾರ್, ದಬ್ಬಾಳಿಕೆ ತಿದ್ದಿಕೊಳ್ಳಲಿ ಎಂದು ಅವರು ಆಕ್ರೋಶ ಹೊರಹಾಕಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷರು ಆಯ್ಕೆ ಪ್ರಕ್ರಿಯೆ ಸಮರ್ಪಕವಾಗಿಯೇ ಆಗಿದೆ. ಚುನಾವಣೆ ಮೂಲಕ ನ್ಯಾಯ ಬದ್ಧವಾಗಿ ಜಿಲ್ಲಾಧ್ಯಕ್ಷರ ಆಯ್ಕೆಯಾಗಿತ್ತು. ಸುಧಾಕರ್ ವಿಷ ಮನಸ್ಸಿನಲ್ಲಿ ವಿಷ ತುಂಬಿದೆ. ಲೋಕಸಭೆ ಚುನಾವಣೆಯಲ್ಲಿ ನನಗೆ ರಾಜಕೀಯ ಆಮೀಷ ಒಡ್ಡಿದ್ದರು. ಡಾ.ಕೆ. ಸುಧಾಕರ್ ಅನಾಚಾರಗಳು ಇಡೀ ರಾಜ್ಯಕ್ಕೆ ಗೊತ್ತಿವೆ.
ಕಳೆದ 12 ವರ್ಷಗಳಿಂದ ಡಾ. ಸುಧಾಕರ್ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಸುಧಾಕರಿಗೆ ನಾನು ಬಗ್ಗಲ್ಲ ಸುಧಾಕರ್ ಹೇಳಿದಂತೆ ಕೇಳದಿದ್ದಕ್ಕೆ ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ. ಸುಧಾಕರ್ ಅವರನ್ನು ಗೆಲ್ಲಿಸಲು ತನು ಮನ ಧನವನ್ನು ಅರ್ಪಿಸಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಸುಧಾಕರ್ ಗೆಲ್ಲಿಸಲು ಶ್ರಮ ಪಟ್ಟಿದ್ದೇನೆ. ಆದರೂ ನನ್ನ ಮೇಲೆ ಸುಧಾಕರ್ ದ್ವೇಷ ಸಾಧಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಡಾ. ಕೆ.ಸುಧಾಕರ್ ಕಿರುಕುಳದಿಂದ ನಾನು ರಾಜಕೀಯಕ್ಕೆ ಬಂದಿದ್ದೇನೆ. ಕೊರೋನ ಸಮಯದಲ್ಲಿ ಸುಧಾಕರ್ ಬಹಳಷ್ಟು ಅಕ್ರಮ ಮಾಡಿದ್ದಾರೆ. ಮೈಕ್ರೋ ಫೈನಾನ್ಸ್ ಗೆ ಹಣ ವರ್ಗಾವಣೆ ಮಾಡಿ ಅಕ್ರಮ ಮಾಡಿದ್ದಾರೆ. ನ್ಯಾ.ಜಾನ್ ಮೈಕಲ್ ಡಿ ಕುನ್ಹಾ ಅವರು ಇದನ್ನು ಗಮನಿಸಬೇಕು. ಕೋವಿಡ್ ಅಕ್ರಮದ ತನಿಖೆ ನಡೆಸುತ್ತಿರುವ ನ್ಯಾ.ಜಾನ್ ಮೈಕಲ್ ಡಿ ಕುನ್ಹಾ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರನ್ನು ಸಮಾಧಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದ ಸುಧಾಕರ್ ವಿರುದ್ಧ ಸಂದೀಪ್ ರೆಡ್ಡಿ ವಾಗ್ದಾಳಿ ನಡೆಸಿದರು.