ಚಾಮರಾಜನಗರ : ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿ ನಂತರ ಪತಿ ನಾಪತ್ತೆ ಎನ್ನುವ ನಾಟಕ ಆಡಿದ್ದ ಘಟನೆ ಚಾಮರಾಜನಗರ ತಾಲೂಕಿನ ಜನ್ನೂರು ಎಂಬ ಗ್ರಾಮದಲ್ಲಿ ನಡೆದಿದೆ. ಸಂತೇಮರಹಳ್ಳಿ ತಾಲೂಕಿನ ಜನ್ನೂರು ಗ್ರಾಮದ ರಮೇಶ್(45) ಎಂಬಾತ ಪತ್ನಿಯಿಂದಲೇ ಕೊಲೆಯಾದ ದುರ್ದೈವಿ ಎಂದು ತಿಳಿದುಬಂದಿದೆ.
ಈತನ ಪತ್ನಿ ಗೀತಾ(38) ಹಾಗೂ ಈಕೆಯ ಪ್ರಿಯಕರ ಗುರುಪಾದಸ್ವಾಮಿ(40) ಎಂಬವರನ್ನು ಪೊಲೀಸರು ಜೈಲಿಗಟ್ಟಿದ್ದಾರೆ.ಪತಿ ರಮೇಶ್ ಗೆ ಮಚ್ಚಿನ ಹಿಂಭಾಗದಿಂದ ಬಲವಾಗಿ ತಲೆಗೆ ಹೊಡೆದು ಬಳಿಕ ದಿಂಬಿನಲ್ಲಿ ಉಸಿರುಗಟ್ಟಿಸಿ ಸಾಯಿಸಲಾಗಿದೆ. ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಬೈಕ್ ನಲ್ಲಿ ಹೊತ್ತು ಕುಪ್ಪೇಗಾಲದ ಕಪಿಲಾ ನದಿಯಲ್ಲಿ ಬಿಸಾಡಿದ್ದಾರೆ.
ಗೀತಾ ಮತ್ತು ಪ್ರಿಯಕರ ಗುರುಪಾದಸ್ವಾಮಿಯನ್ನು ಪೊಲೀಸರು ಭಾನುವಾರದಂದು ಹೆಚ್ಚಿನ ವಿಚಾರಣೆ ನಡೆಸಿದ ಬಳಿಕ ಕೊಲೆ ಪ್ರಕರಣವನ್ನು ಬೇಧಿಸಿದ್ದಾರೆ. ಕುದೇರು ಠಾಣೆ ಪೊಲೀಸರು ನಾಪತ್ತೆ ನಾಟಕ ಆಡಿದ್ದ ಪತ್ನಿ ಹಾಗೂ ಪ್ರಿಯಕರನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಫೆ.2ರಂದು ಮೃತ ರಮೇಶನ ಅಕ್ಕ ಸುವರ್ಣ ಠಾಣೆಗೆ ಬಂದು ಅನೈತಿಕ ಸಂಬಂಧದ ಕಾರಣದಿಂದ ತಮ್ಮನನ್ನು ಪತ್ನಿಯೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ದೂರು ಕೊಟ್ಟಿದ್ದರಿಂದ ಇಬ್ಬರನ್ನು ಕರೆತಂದು ವಿಚಾರಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.