ಹಾವೇರಿ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ನಿನ್ನೆ ಒಂದೇ ದಿನ ನಾಲ್ವರು ಬಲಿಯಾಗಿದ್ದು, ಹಾವೇರಿ, ಹಾಸನ ಜಿಲ್ಲೆಯಲ್ಲಿ ತಲಾ ಒಬ್ಬರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಬ್ಬರುಉ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಅಡವಿ ಆಂಜನೇಯ ಬಡಾವಣೆಯಲ್ಲಿ ಮಾಲತೇಶ್ (42) ಎಂಬುವರು ಮೈಕ್ರೋ ಫೈನಾನ್ಸ್ ಕಿರುಕುಳದಿಂದ ನೊಂದು ಮನೆಯಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಇನ್ನು ಹಾಸನ ಜಿಲ್ಲೆಯ ಅರಕಲಗೂಡ ತಾಲೂಕಿನ ಕಂಟೇನಹಳ್ಳಿಯಲ್ಲಿ ರೈತ ರವಿ (50) ಎಂಬುವರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರವಿ ವಿವಿಧ ಸಂಘ, ಮೈಕ್ರೋ ಫೈನಾನ್ಸ್ ಗಳಿಂದ 9 ಲಕ್ಷ ಸಾಲ ಮಾಡಿದ್ದರು. ಜೊತೆಗೆ ಶುಂಠಿ ಬೆಲೆ ಕುಸಿತ ಕಂಡಿದ್ದು, ಇದರಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಎಚ್.ನಾಗಸಂದ್ರ ಗ್ರಾಮದಲ್ಲಿ ಎನ್. ಆರ್ ನರಸಿಂಹಯ್ಯ (58) ಎಂಬುವರು ನೇಣಿಗೆ ಶರಣಾಗಿದ್ದಾರೆ. ಆಟೋ ಚಾಲಕರಾಗಿದ್ದ ಇವರು ಧರ್ಮಸ್ಥಳ ಸಂಘ, ಆಶೀರ್ವಾದ, ಗ್ರಾಮೀಣ ಕೂಡ, ಎಲ್ ಅಂಡ್ ಟಿ, ಸ್ಪಂದನ, ಸಮಸ್ತ, ನವ ಚೇತನ್ಯ ಫೈನಾನ್ಸ್ ಕಂಪನಿಗಳಲ್ಲಿ ಒಟ್ಟು 3.5 ಲಕ್ಷ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ. ಸಾಲ ಕಟ್ಟಲು ಹಣವಿಲ್ಲದ ಕಾರಣ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಗಿರೀಶ್ (26) ಕೂಲಿ ಕಾರ್ಮಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರೀಶ್ ವಿವಿಧ ಮೈಕ್ರೋ ಫೈನಾನ್ಸ್ ಗಳಿಂದ ೊಟ್ಟು 4 ಲಕ್ಷ ರೂ. ಸಾಲ ಮಾಡಿದ್ದರು.