ಹಾವೇರಿ : ಹಾವೇರಿಯಲ್ಲಿ ಘೋರವಾದ ಘಟನೆ ನಡೆದಿದ್ದು, ಎಗ್ ರೈಸ್ ನಲ್ಲಿ ವಿಷ ಬೆರೆಸಿ ಮೊದಲು ಮಕ್ಕಳಿಗೆ ತಿನ್ನಿಸಿ ಬಳಿಕ ತಂದೆ ತಾನು ಕೂಡ ತಿಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾವೇರಿ ತಾಲೂಕಿನ ಹಳೇರಿತ್ತಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾಗಪ್ಪ ತಿಪ್ಪಣ್ಣ ಪೌಡೆಪ್ಪನವರ ಎಂಬುವವರು ತಮ್ಮ ಮಕ್ಕಳಿಬ್ಬರಿಗೆ ವಿಷವುಣಿಸಿ ತಾವೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಪತ್ನಿ ಹಾಗೂ ಇಬ್ಬರು ಮಕ್ಕಳು, ಹಳೇರಿತ್ತಿಯಲ್ಲಿ ವಾಸವಿದ್ದರು. ಇತ್ತೀಚೆಗಷ್ಟೇ ಊರಿಗೆ ಬಂದಿದ್ದ ನಾಗಪ್ಪ, ಸೋಮವಾರ ತಮ್ಮಿಬ್ಬರ ಮಕ್ಕಳಿಗೆ ವಿಷ ಮಿಶ್ರಣ ಮಾಡಿದ್ದ ಎಗ್ರೈಸ್ ತಿನ್ನಿಸಿದ್ದ. ನಂತರ, ತಾವೂ ಅದೇ ಎಗ್ರೈಸ್ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಾಗಪ್ಪ ಅವರು ವಿವಿಧ ಕಡೆಗಳಲ್ಲಿ ಸಾಲ ಮಾಡಿದ್ದರು. ಸಾಲಗಾರರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿರುವ ಅನುಮಾನವಿದೆ. ಜೊತೆಗೆ, ಕೌಟುಂಬಿಕ ವಿಚಾರವೂ ಕಾರಣವಾಗಿರಬಹುದು. ಪೊಲೀಸರು ಸೂಕ್ತ ತನಿಖೆ ನಡೆಸಿ, ನಿಜಾಂಶ ತಿಳಿಸಬೇಕು ಎಂದು ಸಂಬಂಧಿಕರೊಬ್ಬರು ತಿಳಿಸಿದರು.
ವಿಷದ ಆಹಾರ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ತಂದೆ ಹಾಗೂ ಮಕ್ಕಳಿಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿರುವ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಮೂವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.