ಬೆಂಗಳೂರು: ರಾಜ್ಯದ ಕ್ರೀಡಾಪಟುಗಳಿಗೆ ಭರ್ಜರಿ ಸಿಹಿಸುದ್ದಿ ಎನ್ನುವಂತೆ ಪೊಲೀಸ್ ಇಲಾಖೆಯ ವಿವಿಧ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ನೀಡಲಾಗುತ್ತಿದ್ದಂತ ಮೀಸಲಾತಿ ಪ್ರಮಾಣವನ್ನು ಶೇ.2ರಿಂದ 3ಕ್ಕೆ ಹೆಚ್ಚಳ ಮಾಡುವಂತ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ.
ಗುರುವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಕಾನ್ಸಟೇಬಲ್ನಿಂದ ಡಿವೈಎಸ್ಪಿ ವರೆಗೆ ಪ್ರಶಂಸನೀಯ ಕ್ರೀಡಾಪಟುಗಳ ಮೀಸಲಾತಿ ಪ್ರಮಾಣವನ್ನು ಶೇ.2 ರಿಂದ ಶೇ.3ಕ್ಕೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಈಗ ಈ ಮೀಸಲಾತಿ ಪ್ರಮಾಣ ಶೇ.2 ರಷ್ಟಿದ್ದು ಇದನ್ನು ಶೇ.3ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದೆ. 2023ರಲ್ಲಿನ ಅನುಸೂಚಿಯ ಕ್ರಮ ಸಂಖ್ಯೆ (3) ರಲ್ಲಿ ಡಿ.ವೈ.ಎಸ್.ಪಿ ಹುದ್ದೆಯ ವಯೋಮಿತಿ ಕಾಲಂನಲ್ಲಿ ಎಸ್ಸಿ/ಎಸ್ಟಿ ಹಾಗೂ ಕೆಟಗರಿ-1 ರ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 45 ವರ್ಷಗಳಿಗೆ ಹೆಚ್ಚಿಸಲು ನಿಯಮಗಳಿಗೆ ತಿದ್ದುಪಡಿ ತರಲಾಗುತ್ತದೆ.
ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು (ಪೊಲೀಸ್ ಕಾನ್ಸ್ ಸ್ಟೇಬಲ್, ಪೊಲೀಸ್ ಸಬ್-ಇನ್ಸ್ ಪೆಕ್ಟರ್ ಮತ್ತು ಪೊಲೀಸ್ ಉಪಾಧೀಕ್ಷಕರ ಹುದ್ದೆಗೆ ಪ್ರತಿಭಾವಂತ ಕ್ರೀಡಾಪಡುಗಳ ನೇರ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು, 2025ರ ಕರಡು ನಿಯಮಗಳನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿ, ಅದರಿಂದ ಬಾಧಿತರಾದವರಿಂದ ಆಕ್ಷೇಪಣೆ / ಸಲಹೆಗಳನ್ನು ಆಹ್ವಾನಿಸಲು; ಸದರಿ ನಿಯಮಗಳಿಗೆ ಯಾವುದೇ ಗಂಭೀರ ಸ್ವರೂಪದ ಆಕ್ಷೇಪಣೆ / ಸಲಹೆಗಳನ್ನು ಸ್ವೀಕೃತವಾಗದಿದ್ದಲ್ಲಿ ಅಥವಾ ಸ್ವೀಕೃತವಾದ ಆಕ್ಷೇಪಣೆ / ಸಲಹೆಗಳನ್ನು ಪರಿಗಣಿಸಿ ಕರಡು ನಿಯಮಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಿದ್ದಲ್ಲಿ ಪುನ: ಸಚಿವ ಸಂಪುಟದ ಮುಂದೆ ಮಂಡಿಸದೇ ಸದರಿ ಕರಡು ನಿಯಮಗಳನ್ನು ಅಂತಿಮಗೊಳಿಸಲು; ಸಚಿವ ಸಂಪುಟ ನಿರ್ಧರಿಸಿದೆ. ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಕ್ರೀಡಾಪಟುಗಳ ಮೀಸಲಾತಿಯ ಪ್ರಮಾಣವನ್ನು ಶೇ.3 ಕ್ಕೆ ಹೆಚ್ಚಿಸಲು ಘೋಷಿಸಲಾಗಿತ್ತು.