ಕಲಬುರ್ಗಿ : ಶಾರ್ಟ್ ಸರ್ಕ್ಯೂಟ್ ನಿಂದ ಸುಮಾರು 10 ಎಕರೆಯಲ್ಲಿ ಇದ್ದಂತಹ 500 ಟನ್ ಕಬ್ಬು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಹೊಸಳ್ಳಿ (ಎಚ್) ಗ್ರಾಮದಲ್ಲಿ ನಡೆದಿದೆ.
ಹೌದು ನಿನ್ನೆ ಮಧ್ಯಾಹ್ನ ಗ್ರಾಮದ ಶ್ರೀದೇವಿ ಲಕ್ಷಮಯ್ಯ ಗುತ್ತೇದಾರ ಅವರ ಹೊಲದ ಕಬ್ಬಿಗೆ ಬೆಂಕಿ ಹೊತ್ತಿಕೊಂಡಿದೆ, ಇದಾದ ಬಳಿಕ ಪಕ್ಕದ ಮೋತಿಬಾಯಿ ಜೇನು, ಹಾಗೂ ಲಕ್ಷ್ಮಣ ಧನಸಿಂಗ ಅವರ ಹೊಲಕ್ಕೂ ಬೆಂಕಿ ಹರಡಿದ ಪರಿಣಾಮ ಒಟ್ಟು 10 ಎಕರೆಯಷ್ಟು ಕಬ್ಬು ಸುಟ್ಟು ಕರಕಲಾಗಿದೆ.
ಪ್ರತಿ ಎಕರೆಯಲ್ಲಿ 50 ಟನ್ ಸಾಮರ್ಥ್ಯದ ಕಬ್ಬು ಬೆಳೆದಿದ್ದು, 10 ಎಕರೆಯಂತೆ ಸುಮಾರು 500 ಟನ್ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಇದರಿಂದ ರೈತರು 10 ಲಕ್ಷಕ್ಕೂ ಅಧಿಕ ಮೌಲ್ಯದ ಕಬ್ಬು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.